ಚಂಡೀಗಢ: ‘ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಅಭಾವ ತಲೆದೋರಿಲ್ಲ. ದೇಶೀಯ ಬೇಡಿಕೆಗೆ ಅಗತ್ಯವಿರುವಷ್ಟು ತೈಲ ದಾಸ್ತಾನಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ಬಿಕ್ಕಟ್ಟು ಶಾಂತವಾಗುತ್ತಿದೆ. ಇದು ಉಲ್ಬಣಿಸಬಾರದು ಎಂಬುದು ಎಲ್ಲರ ಇಚ್ಛೆ. ಇದರಿಂದ ಎಲ್ಲರೂ ತೊಂದರೆಗೆ ಸಿಲುಕುತ್ತಾರೆ’ ಎಂದರು.
ಪ್ರತಿದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ 105 ದಶಲಕ್ಷ ಬ್ಯಾರೆಲ್‌ನಷ್ಟು ಕಚ್ಚಾ ತೈಲ ಉತ್ಪಾದನೆಯಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳ ಸಂಘಟನೆಯು (ಒಪೆಕ್) 5 ದಶಲಕ್ಷ ಬ್ಯಾರೆಲ್‌ನಷ್ಟು (ದಿನವೊಂದಕ್ಕೆ) ಉತ್ಪಾದನೆಯನ್ನು ಕಡಿತಗೊಳಿಸಿದೆ ಎಂದು ವಿವರಿಸಿದರು.
‘ಇಸ್ರೇಲ್ ಮತ್ತು ಇರಾನ್ ನಡುವಿನ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲವನ್ನು ಹಾಲಿ ಮಾರ್ಗದ ಬದಲಾಗಿ ಪರ್ಯಾಯ ಮಾರ್ಗದ ಮೂಲಕ ಸಾಗಣೆ ಮಾಡಬೇಕಾಗುತ್ತಿದೆ. ಇದರಿಂದ ಸಾಗಣೆ ಮತ್ತು ವಿಮಾ ವೆಚ್ಚ ಏರಿಕೆಯಾಗುತ್ತಿದೆ. ಶುದ್ಧೀಕರಣ ವೆಚ್ಚ ಭರಿಸಬೇಕಿದೆ. ಡೀಲರ್‌ಗಳ ಕಮಿಶನ್ ಕೂಡ ನೀಡಬೇಕಾಗುತ್ತದೆ. ಹಾಗಾಗಿ, ಕಚ್ಚಾ ತೈಲದ ಬೆಲೆಯನ್ನು ಲೆಕ್ಕ ಹಾಕುವುದು ಕಷ್ಟಕರ’ ಎಂದರು.
‘2021ರ ನವೆಂಬರ್ ಮತ್ತು 2022ರ ಮೇ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಕಚ್ಚಾ ತೈಲದ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಕಡಿತಗೊಳಿಸಿತು. ಇದರಿಂದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆಯಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.