ADVERTISEMENT

ಅಡಮಾನರಹಿತ ಸಾಲ ಇಳಿಕೆ: ಶಕ್ತಿಕಾಂತ ದಾಸ್‌

ಬಿಗಿ ನಿಯಮದಿಂದ ತಗ್ಗಿದ ಅಪಾಯ

ಪಿಟಿಐ
Published 20 ಜೂನ್ 2024, 15:36 IST
Last Updated 20 ಜೂನ್ 2024, 15:36 IST
ಶಕ್ತಿಕಾಂತ ದಾಸ್ –ಪಿಟಿಐ ಚಿತ್ರ
ಶಕ್ತಿಕಾಂತ ದಾಸ್ –ಪಿಟಿಐ ಚಿತ್ರ   

ಮುಂಬೈ: ‘ಅಡಮಾನರಹಿತ ಸಾಲಗಳು ಆರ್ಥಿಕತೆ ಬೆಳವಣಿಗೆಗೆ ದೊಡ್ಡ ಅಪಾಯ ಒಡ್ಡುತ್ತವೆ. ಇಂತಹ ಸಾಲ ನೀಡಿಕೆ ಮೇಲೆ ಬಿಗಿಯಾದ ಕ್ರಮ ಕೈಗೊಂಡಿದ್ದರಿಂದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಎದುರಾಗಬಹುದಾದ ಅಪಾಯಮಟ್ಟವು ತಗ್ಗಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

ಆರ್‌ಬಿಐನಿಂದ ಗುರುವಾರ ‘ಆರ್ಥಿಕತೆ ಚೇತರಿಕೆ’ ಕುರಿತು ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸಂಭಾವ್ಯ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಹೆಜ್ಜೆಯಾಗಿ ಅಡಮಾನರಹಿತ ವೈಯಕ್ತಿಕ ಸಾಲ ನೀಡಿಕೆಯ ನಿಯಮಗಳನ್ನು ಬಿಗಿಗೊಳಿಸಲಾಗಿತ್ತು ಎಂದರು.

ADVERTISEMENT
ದೇಶೀಯ ಹಣಕಾಸು ವ್ಯವಸ್ಥೆಯು ಹಿಂದಿಗಿಂತಲೂ ಹೆಚ್ಚು ಸದೃಢವಾಗಿದೆ. ಕೋವಿಡ್‌ ಸಾಂಕ್ರಾಮಿಕದ ಪೂರ್ವದ ಸ್ಥಿತಿಗೆ ಮರಳಿದ್ದೇವೆ. 
ಶಕ್ತಿಕಾಂತ ದಾಸ್‌, ಗವರ್ನರ್‌ ಆರ್‌ಬಿಐ

‘ಇಂತಹ ಸಾಲ ನೀಡಿಕೆ ಬಗ್ಗೆ ಉಪೇಕ್ಷೆ ತಳೆದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳು ಸೃಷ್ಟಿಯಾಗುವುದು ನಿಶ್ಚಿತ. ಬಿಗಿ ನಿಲುವು ತಳೆದಿದ್ದರಿಂದ ಅಡಮಾನರಹಿತ ಸಾಲ ನೀಡಿಕೆ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಕ್ರಮವು ನನಗೆ ಸಮಾಧಾನ ತಂದಿದೆ’ ಎಂದು ತಿಳಿಸಿದರು.

ಆರ್‌ಬಿಐ ನಿರ್ಬಂಧ ವಿಧಿಸುವುದಕ್ಕೂ ಮೊದಲು ತುರ್ತು ಅಗತ್ಯಗಳಿಗೆ ನೀಡುವ ಕ್ರೆಡಿಟ್ ಕಾರ್ಡ್ ಸಾಲದ ಪ್ರಮಾಣವು ಶೇ 30ರಷ್ಟು ಇತ್ತು. ಸದ್ಯ ಶೇ 23ಕ್ಕೆ ಕುಗ್ಗಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಸಾಲ ನೀಡಿಕೆ ಪ್ರಮಾಣವು ಶೇ 29ರಿಂದ ಶೇ 18ಕ್ಕೆ ಇಳಿಕೆಯಾಗಿದೆ ಎಂದು ವಿವರಿಸಿದರು. 

ಕಳೆದ ವರ್ಷದ ನವೆಂಬರ್‌ 16ರಂದು ಅಡಮಾನರಹಿತ ವೈಯಕ್ತಿಕ ಸಾಲ ನೀಡುವುದರಿಂದ ಆಗಬಹುದಾದ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದ ಪ್ರಮಾಣವನ್ನು (ರಿಸ್ಕ್‌ ವೇಯ್ಟ್‌) ಆರ್‌ಬಿಐ ಹೆಚ್ಚಿಸಿತ್ತು. ಈ ಕ್ರಮದಿಂದಾಗಿ ಎನ್‌ಬಿಎಫ್‌ಸಿಗಳಿಂದ ಸಾಲ ನೀಡಿಕೆಯಲ್ಲಿ ಇಳಿಕೆಯಾಗಿದೆ ಎಂದರು.

ದೇಶದಲ್ಲಿ ಬಂಡವಾಳ ಪ್ರಮಾಣವೂ ಹೆಚ್ಚಿದೆ. ವಸೂಲಾಗದ ಸಾಲದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸರ್ಕಾರಿ ಹಾಗೂ ಸರ್ಕಾರೇತರ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಯು ಉತ್ತಮವಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.