ADVERTISEMENT

ಪ್ಯಾರಿಸ್ ಐಫೆಲ್ ಟವರ್ ವೀಕ್ಷಿಸಲು ಇನ್ನುಮುಂದೆ ಭಾರತದ UPI ಮೂಲಕವೂ ಪಾವತಿಸಬಹುದು

ಪಿಟಿಐ
Published 2 ಫೆಬ್ರುವರಿ 2024, 14:45 IST
Last Updated 2 ಫೆಬ್ರುವರಿ 2024, 14:45 IST
   

ಮುಂಬೈ: ಪ್ಯಾರಿಸ್‌ನ ಐತಿಹಾಸಿಕ ಐಫೆಲ್ ಟವರ್ ವೀಕ್ಷಿಸಲಿಚ್ಛಿಸುವ ಪ್ರವಾಸಿಗರು ಇನ್ನುಮುಂದೆ ಭಾರತದ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್‌ (UPI) ಮೂಲಕವೂ ಪಾವತಿಸಬಹುದು ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಶುಕ್ರವಾರ ಹೇಳಿದೆ.

NPCIನ ಅಂಗ ಸಂಸ್ಥೆಯಾದ ಅಂತರರಾಷ್ಟ್ರೀಯ ಪೇಮೆಂಟ್‌ (NIPL) ಫ್ರಾನ್ಸ್‌ನ ಇ–ಕಾಮರ್ಸ್‌ ಹಾಗೂ ಲೈರಾ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಆ ಮೂಲಕ ಐರೋಪ್ಯ ರಾಷ್ಟ್ರಗಳಲ್ಲೂ ಯುಪಿಐ ಪಾವತಿಗೆ ಸಾಧ್ಯವಿದ್ದು, ಅದರ ಆರಂಭ ಐಫೆಲ್ ಟವರ್‌ನಿಂದ ಆಗುತ್ತಿದೆ.

ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಆಯೋಜಿಸಿದ್ದ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಘೋಷಣೆ ಹೊರಬಿದ್ದಿದೆ.

ADVERTISEMENT

‘ಐಫೆಲ್ ಟವರ್‌ಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಭಾರತ ಪ್ರವಾಸಿಗರ ಸಂಖ್ಯೆ 2ನೇ ಸ್ಥಾನದಲ್ಲಿದೆ. ಹೀಗಾಗಿ ಭಾರತೀಯ ಪ್ರವಾಸಿಗರು ಇನ್ನು ಮುಂದೆ ಸರಳವಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಫ್ರಾನ್ಸ್‌ನಲ್ಲಿ ಪಾವತಿ ಮಾಡಬಹುದಾಗಿದೆ. ಫ್ರಾನ್ಸ್‌ನಲ್ಲಿ ಯುಪಿಐ ಪಾವತಿಯ ಮೊದಲ ತಾಣ ಐಫೆಲ್ ಟವರ್ ಆಗಿರಲಿದೆ. ಮುಂದೆ ಇದು ಫ್ರಾನ್ಸ್‌ ಹಾಗೂ ಇತರ ಐರೋಪ್ಯ ರಾಷ್ಟ್ರಗಳ ಪ್ರವಾಸಿ ತಾಣ ಹಾಗೂ ರಿಟೇಲ್ ಮಳಿಗೆಗಳಿಗೂ ವಿಸ್ತರಣೆಗೊಳ್ಳಲಿದೆ ಎಂದು NIPL ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿತೇಶ್ ಶುಕ್ಲಾ ತಿಳಿಸಿದ್ದಾರೆ.

‘ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಗಳೊಂದಿಗೆ ನಾವು ಒಡಂಬಡಿಕೆ ಮಾಡುವ ಉದ್ದೇಶ ಹೊಂದಿದ್ದೇವೆ. ಆ ಮೂಲಕ ಗ್ರಾಹಕರ ಅನುಕೂಲ ಮತ್ತು ಸುರಕ್ಷತೆಯ ಪಾವತಿಯನ್ನು ಗಡಿಯಾಚೆಗೂ ವಿಸ್ತರಿಸಲಿದ್ದೇವೆ’ ಎಂದಿದ್ದಾರೆ.

‘ಫ್ರಾನ್ಸ್ ಮತ್ತು ಯುರೋಪ್‌ನ ಪ್ರವಾಸೋದ್ಯಮದಲ್ಲಿರುವವರಿಗೆ ಈ ಒಡಂಬಡಿಕೆಯು ಅತ್ಯಾಧುನಿಕ ಮತ್ತು ಹೊಸ ವ್ಯಾವಹಾರಿಕ ಅವಕಾಶಗಳನ್ನು ನೀಡುತ್ತಿದೆ’ ಎಂದು ಲೈರಾ ಫ್ರಾನ್ಸ್‌ನ ವಾಣಿಜ್ಯ ನಿರ್ದೇಶಕ ಕ್ರಿಷ್ಟೋಫ್ ಮ್ಯಾರಿಟೇ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.