ನವದೆಹಲಿ: ನೆಕ್ಸ್ಟ್‌ವೇವ್ ಡಿಸ್‌ರಪ್ಟಿವ್ ಟೆಕ್ನಾಲಜೀಸ್ ಮತ್ತು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವು (ಎನ್‌ಎಸ್‌ಡಿಸಿ) 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮುಂದಿನ ಪೀಳಿಗೆಯ ತಂತ್ರಜ್ಞಾನದ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿದೆ.
ಸ್ಕಿಲ್‌ಅಪ್ ಇಂಡಿಯಾ–4 ಎಂಬ ಈ ಅಭಿಯಾನದಲ್ಲಿ 30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಅವರ ಪೈಕಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 1,000ಕ್ಕೂ ಹೆಚ್ಚು ಕಂಪನಿಗಳ ಜೊತೆಗೆ ಉದ್ಯೋಗಕ್ಕಾಗಿ ಸಂಪರ್ಕ ಕಲ್ಪಿಸಿಕೊಡಲಾಗುವುದು.
ಈ ತರಬೇತಿಯಡಿ ಮುಂದಿನ ಒಂದು ವರ್ಷದಲ್ಲಿ ದೇಶದ 3,000 ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳ 30 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದೇವೆ. ಕಾರ್ಯಾಗಾರಗಳು, ಹ್ಯಾಕಥಾನ್‌ನಂತಹ ಹಲವಾರು ಚಟುವಟಿಕೆಗಳನ್ನು ಆಯೋಜಿಸಲಿದ್ದೇವೆ. ಮಷೀನ್ ಲರ್ನಿಂಗ್, ಡೇಟಾ ಸೈನ್ಸ್, ಜನರೇಟಿವ್ ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಲ್ಲಿ ತರಬೇತಿ ನೀಡಲಿದ್ದೇವೆ ಎಂದು ನೆಕ್ಸ್ಟ್‌ವೇವ್ ಡಿಸ್‌ರಪ್ಟಿವ್ ಟೆಕ್ನಾಲಜೀಸ್‌ನ ಸಿಇಒ ರಾಹುಲ್ ಅಟ್ಟುಲೂರಿ ಹೇಳಿದ್ದಾರೆ.
ಎನ್‌ಎಸ್‌ಡಿಸಿಯ ಸಿಇಒ ವೇದ್ ಮಣಿ ತಿವಾರಿ ಮಾತನಾಡಿ, ಪ್ರಧಾನ ಮಂತ್ರಿಯವರ ‘ವಿಕಸಿತ ಭಾರತ’ದ ದೃಷ್ಟಿಯನ್ನು ಸಾಕಾರಗೊಳಿಸಲು ಇದು ಮಹತ್ವದ ಹೆಜ್ಜೆಯಾಗಿದೆ. ಸ್ಕಿಲ್‌ಅಪ್ ಇಂಡಿಯಾ ಅಭಿಯಾನದ ಅಡಿ, ಸ್ಕಿಲ್ ಇಂಡಿಯಾ ಮಿಷನ್ ಅನ್ನು ಮುನ್ನಡೆಸುತ್ತಿದ್ದೇವೆ. ಜೊತೆಗೆ ಭಾರತವನ್ನು ವಿಶ್ವದ ಕೌಶಲ ಬಂಡವಾಳ ಮತ್ತು ನಾವೀನ್ಯ ಕೇಂದ್ರವಾಗಿರಿಸಲಿದ್ದೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.