ನವದೆಹಲಿ: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮವು (ಎನ್‌ಟಿಪಿಸಿ) 2024–25ನೇ ಹಣಕಾಸು ವರ್ಷದಲ್ಲಿ ತನ್ನ ಒಡೆತನಕ್ಕೆ ಸೇರಿದ ಗಣಿಗಳಿಂದ 4 ಕೋಟಿ ಟನ್‌ನಷ್ಟು ಕಲ್ಲಿದ್ದಲು ಉತ್ಪಾದಿಸುವ ಗುರಿ ಹೊಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 17ರಷ್ಟು ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮಾರ್ಚ್ ಅಂತ್ಯಕ್ಕೆ ಗಣಿ ಪ್ರದೇಶದಿಂದ 3.41 ಕೋಟಿ ಟನ್‌ನಷ್ಟು ಕಲ್ಲಿದ್ದಲು ಸಾಗಣೆ ಮಾಡಿದ್ದು, 3.43 ಕೋಟಿ ಟನ್‌ನಷ್ಟು ಉತ್ಪಾದಿಸಲಾಗಿದೆ ಎಂದು ತಿಳಿಸಿದೆ.
ಕಲ್ಲಿದ್ದಲು ಉತ್ಪಾದನೆಯಲ್ಲಿ ಸುಸ್ಥಿರತೆ ಸಾಧಿಸಲು ಹಲವು ಕಾರ್ಯವಿಧಾನ ಹಾಗೂ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಗಣಿ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಿದೆ. ಗಣಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಲವು ಸುಧಾರಣಾ ಕ್ರಮಕೈಗೊಂಡಿದೆ. ಸ್ವಯಂಚಾಲಿತ ಉಪಕರಣಗಳ ಬಳಕೆಯ ಜೊತೆಗೆ ಕಾರ್ಮಿಕರಿಗೆ ಅಗತ್ಯ ತರಬೇತಿ ಕೂಡ ನೀಡುತ್ತಿದೆ. ಗಣಿಗಾರಿಕೆಯ ಮೇಲ್ವಿಚಾರಣೆ ಮತ್ತು ವಿಶ್ಲೇಷಣಾ ವಿಧಾನವನ್ನು ಅನುಸರಿಸುತ್ತಿದೆ ಎಂದು ತಿಳಿಸಿದೆ.
ಕಂಪನಿಯು ತನ್ನ ಸಾಮರ್ಥ್ಯ ಹೆಚ್ಚಳಕ್ಕೆ ಅನುಗುಣವಾಗಿ ನವೀನ ತಂತ್ರಜ್ಞಾನ ಮತ್ತು ಸುಸ್ಥಿರ ಕಾರ್ಯ ಚಟುವಟಿಕೆಗೆ ಆದ್ಯತೆ ನೀಡಿದೆ. ಆ ಮೂಲಕ ರಾಷ್ಟ್ರದ ಇಂಧನ ಉತ್ಪಾದನಾ ಗುರಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.