ADVERTISEMENT

ದೇಶದಲ್ಲಿ ಎಐ ಆಧಾರಿತ ಮೂಲಸೌಕರ್ಯ ನಿರ್ಮಾಣಕ್ಕೆ ರಿಲಯನ್ಸ್–ಎನ್‌ವಿಡಿಯಾ ಒಪ್ಪಂದ

ಪಿಟಿಐ
Published 24 ಅಕ್ಟೋಬರ್ 2024, 10:19 IST
Last Updated 24 ಅಕ್ಟೋಬರ್ 2024, 10:19 IST
<div class="paragraphs"><p>ಎನ್‌ವಿಡಿಯಾ</p></div>

ಎನ್‌ವಿಡಿಯಾ

   

–ರಾಯಿಟರ್ಸ್ ಚಿತ್ರ

ಮುಂಬೈ: ಭಾರತದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಮೂಲ ಸೌಕರ್ಯ ಹಾಗೂ ನಾವಿನ್ಯತಾ ಕೇಂದ್ರ ನಿರ್ಮಾಣಕ್ಕೆ ಅಮೆರಿಕ ಮೂಲದ ಸಾಫ್ಟ್‌ವೇರ್ ದೈತ್ಯ ಎನ್‌ವಿಡಿಯಾ ಕಾರ್ಪೊರೇಷನ್‌, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ADVERTISEMENT

ರಿಲಯನ್ಸ್‌ನ ಹೊಸ ದತ್ತಾಂಶ ಕೇಂದ್ರವು ಎನ್‌ವಿಡಿಯಾದ ಬ್ಲಾಕ್‌ವೆಲ್ ಎಐ ಚಿಪ್‌ಗಳನ್ನು ಬಳಸಲಿದೆ.

ಮುಂಬೈನಲ್ಲಿ ನಡೆದ ‘ಎನ್‌ವಿಡಿಯಾ ಎಐ ಸಮ್ಮಿಟ್–2024’ರಲ್ಲಿ ಅಂಬಾನಿ ಹಾಗೂ ಎನ್‌ವಿಡಿಯಾ ಸಿಇಒ ಜೇಸನ್ ಹುವಾಂಗ್ ಒಪ್ಪಂದಕ್ಕೆ ಮುದ್ರೆ ಒತ್ತಿದ್ದಾರೆ.

ಎಐ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಮತ್ತು ಈ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವ ಪಾತ್ರದ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.

‘ರಿಲಯನ್ಸ್ ಮತ್ತು ಎನ್‌ವಿಡಿಯಾ ನಡುವಿನ ಪಾಲುದಾರಿಕೆಯು ದೇಶದಲ್ಲಿ ದೃಢವಾದ ಎಐ ಮೂಲಸೌಕರ್ಯವನ್ನು ನಿರ್ಮಿಸುವ ಗುರಿ ಹೊಂದಿದೆ. ಇದು ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸುವುದರ ಜೊತೆಗೆ ಜಾಗತಿಕ ಬುದ್ಧಿಮತ್ತೆ ಮಾರುಕಟ್ಟೆಯಲ್ಲಿ ಭಾರತವನ್ನು ಗಮನಾರ್ಹ ಪಾಲುದಾರನನ್ನಾಗಿ ಮಾಡುತ್ತದೆ’ ಎಂದು ಅಂಬಾನಿ ಹೇಳಿದ್ದಾರೆ.‌

‘ನಾವು ಹೊಸ ಬುದ್ಧಿಮತ್ತೆ ಯುಗದ ಹೊಸ್ತಿಲಲ್ಲಿದ್ದೇವೆ. ಭಾರತವು ಅತಿದೊಡ್ಡ ಬುದ್ಧಿಮತ್ತೆ ಮಾರುಕಟ್ಟೆಗಳಲ್ಲಿ ಒಂದಾಗಲಿದೆ. ಭಾರತವು ಜಗತ್ತಿಗೆ ಕೇವಲ ಸಿಇಒಗಳನ್ನು ಮಾತ್ರ ‌‌ನೀಡುತ್ತಿಲ್ಲ, ಎಐ ಸೇವೆಗಳನ್ನೂ ನೀಡುತ್ತದೆ’ ಎಂದು ಅಂಬಾನಿ ಹೇಳಿದ್ದಾರೆ.

ಭಾರತದ ಗ್ರಾಹಕರಿಗೆ ರಿಲಯನ್ಸ್ ನೀಡಬಹುದಾದ ಅಪ್ಲಿಕೇಶನ್‌ಗಳು ಹಾಗೂ ನಾವಿನ್ಯತೆ ಕೇಂದ್ರ ನಿರ್ಮಾಣದ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಇದೆ ಎಂದು ಹುವಾಂಗ್ ತಿಳಿಸಿದ್ದಾರೆ.

ಆದರೆ ನಾವಿನ್ಯತಾ ಕೇಂದ್ರದ ವಿಸ್ತಾರದ ಬಗ್ಗೆ ಅವರಿಂದ ಯಾವುದೇ ಮಾಹಿತಿ ಬಂದಿಲ್ಲ.

‘ಭಾರತವು ಈಗಾಗಲೇ ವಿಶ್ವ ದರ್ಜೆಯ ಚಿಪ್‌ಗಳನ್ನು ವಿನ್ಯಾಸ ಮಾಡುತ್ತಿದೆ. ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಲ್ಲಿ ಎನ್‌ವಿಡಿಯಾ ವಿನ್ಯಾಸ ಕೇಂದ್ರಗಳಿವೆ’ ಎಂದು ಹುವಾಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.