ನವದೆಹಲಿ: ವಿಶ್ವ ಸಮುದಾಯಗಳ ಎಚ್ಚರಿಕೆ ನಡುವೆಯೂ ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿರುವುದರ ಪರಿಣಾಮ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಕಂಡಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದಾಟಿದೆ. ಏಷ್ಯಾದ ಮಾರುಕಟ್ಟೆಗಳಲ್ಲಿ ಗುರುವಾರ ಬೆಳಗಿನ ವಹಿವಾಟಿನಲ್ಲಿ ಒಂದು ಬ್ಯಾರೆಲ್‌ಗೆ 101 ಡಾಲರ್ ( ಭಾರತೀಯ ರೂಪಾಯಿಗಳಲ್ಲಿ ಸುಮಾರು ₹ 7,581) ಏರಿಕೆಯಾಗಿದೆ. ನಿನ್ನೆ ಕಚ್ಚಾ ತೈಲದ ಬೆಲೆಯು 100 ಡಾಲರ್ ಸಮೀಪದಲ್ಲಿ ಇತ್ತು.
ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಬೆನ್ನಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಕಂಡಿದೆ. 2014ರ ನಂತರ ಕಚ್ಚಾ ತೈಲದ ಬೆಲೆ $100 ಡಾಲರ್ ದಾಟಿರುವುದು ಇದೇ ಮೊದಲು ಎಂದು ವರದಿಗಳು ತಿಳಿಸಿವೆ.
ರಷ್ಯಾ–ಉಕ್ರೇನ್ ಬಿಕ್ಕಟ್ಟು ಇನ್ನಷ್ಟು ತೀವ್ರವಾದರೆ ತೈಲ ಪೂರೈಕೆಗೆ ಅಡಚಣೆ ಉಂಟಾಗಬಹುದು ಎಂಬ ಭೀತಿಯಿಂದ, ಏಪ್ರಿಲ್‌ನಲ್ಲಿ ಪೂರೈಕೆಯಾಗಬೇಕಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆಯು 100 ಡಾಲರ್ ದಾಟಿದೆ.
ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ರಷ್ಯಾ ಶೇಕಡ 10ರಷ್ಟು ಪಾಲು ಹೊಂದಿದೆ. ಈ ಬಿಕ್ಕಟ್ಟು ಮುಂದುವರೆದರೆ ತೈಲದ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದರ ಪರಿಣಾಮ ಮುಂದಿನ ದಿನಗಳಲ್ಲಿ ಭಾರತದ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.
ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ್ದು ರಷ್ಯಾದಿಂದ ನಮ್ಮ ದೇಶದ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಆಗಿದ್ದು, ಹಲವೆಡೆ ಸ್ಫೋಟದ ಸದ್ದು ಕೇಳಿಬರುತ್ತಿದೆ ಎಂದು ಉಕ್ರೇನ್ ಹೇಳಿದೆ.
ಗುರುವಾರ ಬೆಳಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ದೂರದರ್ಶನದ ಹೇಳಿಕೆಯಲ್ಲಿ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಣೆ ಮಾಡಿದ್ದರು.
ಇದನ್ನೂ ಓದಿ..ಉಕ್ರೇನ್ ಮೇಲೆ ರಷ್ಯಾ ದಾಳಿ: ದೇಶೀಯ ಷೇರುಪೇಟೆ ಕುಸಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.