ನವದೆಹಲಿ : ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಜನವರಿಯಲ್ಲಿ ದಾಖಲೆಯ ಮಟ್ಟಕ್ಕೆ ತಲುಪಿದೆ ಎಂದು ಮೂಲಗಳು ಹೇಳಿವೆ.
ಭಾರತವು ಜನವರಿ ತಿಂಗಳಿನಲ್ಲಿ ದಿನಕ್ಕೆ 14 ಲಕ್ಷ ಬ್ಯಾರಲ್ ತೈಲ ಆಮದು ಮಾಡಿಕೊಂಡಿದೆ. ಡಿಸೆಂಬರ್‌ನಲ್ಲಿ ಆಗಿದ್ದ ಆಮದು ಪ್ರಮಾಣಕ್ಕೆ ಹೋಲಿಸಿದರೆ ಶೇ 9.2ರಷ್ಟು ಹೆಚ್ಚಾಗಿದೆ. ಈ ಮೂಲಕ ರಷ್ಯಾ ದೇಶವು ಭಾರತಕ್ಕೆ ತೈಲ ಪೂರೈಸುವುದರಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.
ಇರಾಕ್ ಮತ್ತು ಸೌದಿ ಅರೇಬಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಭಾರತದ ತೈಲ ಸಂಸ್ಕರಣಾ ಕಂಪನಿಗಳು ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ತಮ್ಮ ಸಂಗ್ರಹಾಗಾರಗಳ ನಿರ್ವಹಣೆ ಕೆಲಸ ಕೈಗೊಳ್ಳುತ್ತವೆ. ಹೀಗಾಗಿ ಕೇಂದ್ರ ಸರ್ಕಾರವು ನಿಗದಿ ಪಡಿಸುವ ವಾರ್ಷಿಕ ಉತ್ಪಾದನಾ ಗುರಿಯನ್ನು ತಲುಪಲು ಸಲುವಾಗಿ ಆಮದು ಮಾಡಿಕೊಳ್ಳವುದು ಹೆಚ್ಚಾಗುತ್ತದೆ.
ರಷ್ಯಾ–ಉಕ್ರೇನ್ ಸಂಘರ್ಷ ಆರಂಭ ಆಗಿ, ಪಾಶ್ಚಿಮಾತ್ಯ ದೇಶಗಳು ರಷ್ಯಾ ತೈಲಕ್ಕೆ ನಿರ್ಬಂಧ ವಿಧಿಸಿದ ಬಳಿಕ ಭಾರತಕ್ಕೆ ರಷ್ಯಾದ ತೈಲ ಆಮದು ಆಗುವುದು ಹೆಚ್ಚಾಗುತ್ತಲೇ ಇದೆ.
ಜನವರಿಯಲ್ಲಿ ಕೆನಡಾದಿಂದ ದಿನಕ್ಕೆ 3.14 ಲಕ್ಷ ಬ್ಯಾರಲ್ ತೈಲ ಆಮದಾಗಿದೆ. ಕೆನಡಾ ದೇಶವು ಭಾರತಕ್ಕೆ ಹೆಚ್ಚು ತೈಲ ಪೂರೈಸುವ ದೇಶಗಳ ಸಾಲಿನಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. ಯುಎಇ ನಾಲ್ಕನೇ ಸ್ಥಾನದಲ್ಲಿದೆ.
ಇರಾಕ್‌ನಿಂದ ಜನವರಿಯಲ್ಲಿ 9.83 ಲಕ್ಷ ಟನ್ ತೈಲವು ಭಾರತಕ್ಕೆ ಆಮದಾಗಿದೆ. ಇದು ಏಳು ತಿಂಗಳ ಗರಿಷ್ಠ ಮಟ್ಟವಾಗಿದೆ. ಡಿಸೆಂಬರ್‌ಗೆ ಹೋಲಿಸಿದರೆ ಶೇ 11ರಷ್ಟು ಹೆಚ್ಚು ಆಮದಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಏಪ‍್ರಿಲ್–ಡಿಸೆಂಬರ್ ಅವಧಿಯಲ್ಲಿ ಭಾರತಕ್ಕೆ ಕಚ್ಚಾ ತೈಲ ಪೊರೈಸುವ ದೇಶಗಳ ಸಾಲಿನಲ್ಲಿ ಇರಾಕ್ ಮೊದಲ ಸ್ಥಾನದಲ್ಲಿದೆ.
ಸೌದಿ ಅರೇಬಿಯಾ ದೇಶವನ್ನು ಹಿಂದಿಕ್ಕುವ ಮೂಲಕ ರಷ್ಯಾ ಎರಡನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಸೌದಿ ಅರೇಬಿಯಾ ಮೂರನೇ ಸ್ಥಾನಕ್ಕೆ ಇಳಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.