ಲಂಡನ್: ಜಾಗತಿಕ ಮಾರುಕಟ್ಟೆಯಲ್ಲಿ ಮಂಗಳವಾರ ಕಚ್ಚಾ ತೈಲದ ಬೆಲೆಯಲ್ಲಿ ಶೇ 4.70ರಷ್ಟು ಇಳಿಕೆಯಾಗಿದ್ದು, ಎರಡು ವಾರದ ಕನಿಷ್ಠ ಮಟ್ಟಕ್ಕೆ ತಲುಪಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಉಲ್ಬಣದಿಂದಾಗಿ ಕಳೆದ ಎರಡು ವಾರದಿಂದ ಕಚ್ಚಾ ತೈಲದ ಬೆಲೆಯು ಏರಿಕೆಯ ಹಾದಿ ಹಿಡಿದಿತ್ತು. ಆದರೆ, ಇರಾನ್‌ನ ತೈಲ ಉತ್ಪಾದನೆ ಮತ್ತು ಸಂಗ್ರಹಗಾರಗಳ ಮೇಲೆ ವಾಯುದಾಳಿ ನಡೆಸುವುದಿಲ್ಲವೆಂದು ಇಸ್ರೇಲ್ ಘೋಷಿಸಿದೆ ಎಂದು ವರದಿಯಾಗಿದೆ. ಹಾಗಾಗಿ, ತೈಲ ಪೂರೈಕೆ ಸರಪಳಿಗೆ ಎದುರಾಗಿದ್ದ ಆತಂಕ ನಿವಾರಣೆಯಾಗಿದೆ.
ಮತ್ತೊಂದೆಡೆ ಆಮದು ರಾಷ್ಟ್ರಗಳಿಂದ ಬೇಡಿಕೆ ಕೂಡ ಕಡಿಮೆಯಾಗಿದೆ. ಇದರಿಂದ ಕಚ್ಚಾ ತೈಲ ಧಾರಣೆಯು ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಬ್ರೆಂಟ್ ಕಚ್ಚಾ ತೈಲದ ದರವು ಪ್ರತಿ ಬ್ಯಾರೆಲ್‌ಗೆ 3.51 ಡಾಲರ್ ಇಳಿಕೆಯಾಗಿದೆ (ಶೇ 4.71ರಷ್ಟು). ಸದ್ಯ 73.81 ಡಾಲರ್ ಆಗಿದೆ. ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಕಚ್ಚಾ ತೈಲದ ಬೆಲೆಯು 3.48 ಡಾಲರ್ ಕಡಿಮೆಯಾಗಿದ್ದು (ಶೇ 4.7ರಷ್ಟು), ಬ್ಯಾರೆಲ್‌ಗೆ 70.35 ಡಾಲರ್ ಆಗಿದೆ.
ಇರಾನ್‌ನ ಪರಮಾಣು ಘಟಕ ಅಥವಾ ತೈಲ ಉತ್ಪಾದನಾ ಘಟಕಗಳ ವಾಯುದಾಳಿ ನಡೆಸಲಾಗುವುದು ಎಂದು ಕಳೆದ ವಾರ ಇಸ್ರೇಲ್ ಪ್ರಧಾನಿ ಬೆಂಜುಮಿನ್ ನೆತನ್ಯಾಹು ಘೋಷಿಸಿದ್ದರು. ಇದರ ಬೆನ್ನಲ್ಲೇ ಕಚ್ಚಾ ತೈಲದ ಬೆಲೆಯು ಗಗನಮುಖಿಯಾಗಿತ್ತು.
‘ತೈಲ ಉತ್ಪಾದಿಸುವ ರಾಷ್ಟ್ರಗಳು ದರ ಸಮರವನ್ನು ಹಿಂಪಡೆದಿವೆ. ಹಾಗಾಗಿ, ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳು ಕೂಡ ಹೆಚ್ಚು ಸಂಗ್ರಹಕ್ಕೆ ಮುಂದಾಗಿಲ್ಲ. ಇದು ಕೂಡ ಬೆಲೆ ಇಳಿಕೆಗೆ ಕಾರಣವಾಗಿದೆ’ ಎಂದು ಬ್ರೋಕರೇಜ್ ಸಂಸ್ಥೆ ಫಿಲಿಪ್ ನೋವಾದ ಹಿರಿಯ ಮಾರುಕಟ್ಟೆ ವಿಶ್ಲೇಷಕಿ ಪ್ರಿಯಾಂಕಾ ಸಚ್‌ದೇವ ತಿಳಿಸಿದ್ದಾರೆ.
‘ಮಧ್ಯಪ್ರಾಚ್ಯ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ. ಸಂಘರ್ಷ ಕಡಿಮೆಯಾದರೆ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ಗೆ ಇಳಿಕೆಯಾಗುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ಮತ್ತು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯು (ಐಇಎ) ಇದೇ ವಾರದಲ್ಲಿ ಪ್ರಸಕ್ತ ವರ್ಷದ ಜಾಗತಿಕ ತೈಲ ಬೇಡಿಕೆಯ ಮುನ್ನೋಟವನ್ನು ಕಡಿಮೆಗೊಳಿಸುವ ಸಾಧ್ಯತೆಯಿದೆ.
ಕರಡಿ ಕುಣಿತ ಮುಂಬೈ:
ದೇಶದ ಷೇರುಪೇಟೆಯಲ್ಲಿ ಮಂಗಳವಾರ ಕರಡಿ ಕುಣಿತದಿಂದಾಗಿ ಸೂಚ್ಯಂಕಗಳು ಕುಸಿತ ಕಂಡಿವೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 152 ಅಂಶ ಇಳಿಕೆ ಕಂಡು 81820 ಅಂಶಗಳಲ್ಲಿ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 70 ಅಂಶ ಕುಸಿತ ಕಂಡು 25057 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ಸೆಪ್ಟೆಂಬರ್ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಇಳಿಕೆಯಾಗಿರುವುದರಿಂದ ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್‌ನ ಷೇರಿನ ಮೌಲ್ಯದಲ್ಲಿ ಶೇ 2.06ರಷ್ಟು ಕುಸಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.