ADVERTISEMENT

ಸುಯೆಜ್‌ ಕಾಲುವೆ ಸಂಚಾರ ಸುಗಮ: ತೈಲ ಬೆಲೆ ಇಳಿಕೆ

ಏಜೆನ್ಸೀಸ್
Published 29 ಮಾರ್ಚ್ 2021, 16:06 IST
Last Updated 29 ಮಾರ್ಚ್ 2021, 16:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸುಯೆಜ್: ಸುಯೆಜ್ ಕಾಲುವೆಯಲ್ಲಿ ಸರಕು ಸಾಗಣೆಯು ಮತ್ತೆ ಆರಂಭವಾದ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತುಸು ಇಳಿಕೆ ಆಗಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಶೇ 0.8ರಷ್ಟು ಇಳಿಕೆ ಆಗಿ, ಪ್ರತಿ ಬ್ಯಾರೆಲ್‌ಗೆ 64.04 ಅಮೆರಿಕನ್‌ ಡಾಲರ್‌ನಂತೆ ಮಾರಾಟವಾಗಿದೆ.

ಸುಮಾರು ಒಂದು ವಾರದಿಂದ ಕಾಲುವೆಯಲ್ಲಿ ಸಿಲುಕಿದ್ದ ‘ಎವರ್‌ ಗಿವನ್‌’ ಬೃಹತ್ ಹಡಗನ್ನು ಸೋಮವಾರ ತೆರವುಗೊಳಿಸಲಾಗಿದೆ ಎಂದು ಸುಯೆಜ್ ಕಾಲುವೆ ಪ್ರಾಧಿಕಾರ ಹೇಳಿದೆ. ವಿಶ್ವದ ಪ್ರಮುಖ ಸರಕುಸಾಗಣೆ ಜಲಮಾರ್ಗಗಳಲ್ಲಿ ಒಂದಾಗಿರುವ ಸುಯೆಜ್‌ನಲ್ಲಿ ‘ಎವರ್‌ ಗಿವನ್‌’ ಸಿಲುಕಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿ ಜಾಗತಿಕ ವಹಿವಾಟಿನ ಮೇಲೆ ಪರಿಣಾಮ ಬೀರಿತ್ತು.

ADVERTISEMENT

ಹಡಗನ್ನು ಭಾಗಶಃ ತೆರವುಗೊಳಿಸುವ ಮೊದಲೇ ಕಚ್ಚಾ ತೈಲ ಬೆಲೆ ಇಳಿಕೆಯಾಗತೊಡಗಿತ್ತು. ಆದರೆ ನೌಕೆಯನ್ನು ತೆರವುಗೊಳಿಸಲು ಇನ್ನಷ್ಟು ಕಠಿಣ ಪರಿಶ್ರಮವಹಿಸಬೇಕಾಗಬಹುದು ಎಂದು ರಕ್ಷಣಾ ತಜ್ಞರು ಹೇಳಿದ್ದ ಬಳಿಕ ಬೆಲೆ ಏರಿಕೆಯಾಗಿತ್ತು.

ಹಡಗನ್ನು ತೆರವುಗೊಳಿಸಿದ ಕೆಲವೇ ಗಂಟೆಗಳಲ್ಲಿ ಬೆಲೆ ಇಳಿಕೆಯಾಗಿದೆ.

ಹಡಗು ತೆರವಾಗಿದ್ದರೂ ಸುಯೆಜ್‌ನಲ್ಲಿ ಸರಕು ಸಾಗಣೆ ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.

‘ಮಾರುಕಟ್ಟೆ ಮೇಲೆ ಇದರ ಪರಿಣಾಮವು ಶೀಘ್ರದಲ್ಲೇ ಕಂಡುಬರಲಿದೆ. ಕೆಲವೇ ದಿನಗಳಲ್ಲಿ ‘ಎವರ್‌ ಗಿವನ್‌’ ಹಡಗು ಕಾಲುವೆಯಿಂದ ತೆರಳಿದರೂ ಅದು ಸಿಲುಕಿದ್ದ ಪ್ರದೇಶದಲ್ಲಿ ಏರಿಳಿತಗಳು ಕಂಡುಬರಬಹುದು’ ಎಂದು ವಿಶ್ಲೇಷಕ ಲೂಯಿಸ್ ಡಿಕ್ಸನ್ ಹೇಳಿದ್ದಾರೆ.

‘ತೈಲ ಬೇಡಿಕೆ ಮತ್ತು ಉತ್ಪಾದಕರ ಮೇಲೆ ಇದು ಪರಿಣಾಮ ಬೀರಲಿದೆ. ಘಟಕಗಳಿಗೆ ಸರಕುಗಳು ಬರುವುದು ವಿಳಂಬವಾಗುವ ಕಾರಣ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾದ ಅಥವಾ ಮುಂದೂಡಬೇಕಾದ ಪರಿಸ್ಥಿತಿ ಉತ್ಪಾದಕರಿಗೆ ಎದುರಾಗಬಹುದು’ ಎಂದೂ ಅವರು ಹೇಳಿದ್ದಾರೆ.

ಈ ಮಧ್ಯೆ, ‘ಕಾಲುವೆಯು ದಿನದ 24 ಗಂಟೆಯೂ ಕಾರ್ಯಾಚರಿಸಲಿದೆ. ಬಾಕಿ ಇರುವ ನೂರಾರು ಹಡಗುಗಳ ಸಂಚಾರವನ್ನು ಮೂರೂವರೆ ದಿನಗಳಲ್ಲಿ ಪೂರ್ತಿಗೊಳಿಸಲು ಅನುವು ಮಾಡಿಕೊಡಲಾಗುವುದು’ ಎಂದು ಸುಯೆಜ್ ಕಾಲುವೆ ಪ್ರಾಧಿಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.