ADVERTISEMENT

ಕಚ್ಚಾ ತೈಲದ ದರ ಇಳಿಕೆ: ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿತ?

ಪಿಟಿಐ
Published 12 ಸೆಪ್ಟೆಂಬರ್ 2024, 13:58 IST
Last Updated 12 ಸೆಪ್ಟೆಂಬರ್ 2024, 13:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯು ಇಳಿಕೆಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ದೇಶೀಯ ಮಟ್ಟದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕಡಿತವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.  

ಜಾಗತಿಕ ಮಾರುಕಟ್ಟೆಯಲ್ಲಿ ಮಂಗಳವಾರ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ನಂತೆ ಮಾರಾಟವಾಗಿದೆ. 2021ರ ಡಿಸೆಂಬರ್‌ ಬಳಿಕ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ದರ ಕುಸಿತವಾಗಿದೆ.

ಗುರುವಾರ ಬ್ರೆಂಟ್‌ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 71 ಡಾಲರ್‌ ಹಾಗೂ ಅಮೆರಿಕದ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 68 ಡಾಲರ್‌ ಆಗಿದೆ.

ADVERTISEMENT

ಲೋಕಸಭಾ ಚುನಾವಣೆ ವೇಳೆ ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ತಲಾ ₹2 ಕಡಿತಗೊಳಿಸಿತ್ತು. ಕಚ್ಚಾ ತೈಲದ ಬೆಲೆಯು ಮತ್ತಷ್ಟು ಇಳಿಕೆಯಾದರೆ ಇಂಧನ ಬೆಲೆಯ ಪರಿಷ್ಕರಣೆಗೆ ಸರ್ಕಾರ ಮುಂದಾಗಲಿದೆ ಎಂದು ಮೂಲಗಳು ಹೇಳಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್‌ ಜೈನ್‌, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯ ಆಧಾರದ ಮೇಲೆ ಇಂಧನ ಬೆಲೆ ಪರಿಷ್ಕರಣೆಗೆ ತೈಲ ಕಂಪನಿಗಳು ಅಗತ್ಯ ಕ್ರಮಕೈಗೊಳ್ಳಲಿವೆ’ ಎಂದು ಹೇಳಿದ್ದಾರೆ. 

‘ದೀಪಾವಳಿ ಹಬ್ಬದ ವೇಳೆಗೆ ಅಥವಾ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮೊದಲು ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ₹2 ಕಡಿತಗೊಳಿಸುವ ಸಾಧ್ಯತೆಯಿದೆ’ ಎಂದು ಬ್ರೋಕರೇಜ್‌ ಸಂಸ್ಥೆ ಎಮ್ಕೆ ಗ್ಲೋಬಲ್‌ ಫೈನಾನ್ಶಿಯಲ್‌ ಸರ್ವಿಸಸ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.