ADVERTISEMENT

ತೈಲ ಉತ್ಪಾದನೆ: ಭಿನ್ನ ಹೇಳಿಕೆ

ಉತ್ಪಾದನೆ ಹೆಚ್ಚಿಸದೇ ಇರಲು ಸೌದಿ, ರಷ್ಯಾ ನಿರ್ಧಾರ

ಏಜೆನ್ಸೀಸ್
Published 27 ಏಪ್ರಿಲ್ 2019, 20:01 IST
Last Updated 27 ಏಪ್ರಿಲ್ 2019, 20:01 IST
   

ಬೀಜಿಂಗ್/ವಾಷಿಂಗ್ಟನ್ (ಎಎಫ್‌ಪಿ): ಕಚ್ಚಾ ತೈಲ ಉತ್ಪಾದನೆ ಹೆಚ್ಚಳದ ಕುರಿತು ಭಿನ್ನ ಹೇಳಿಕೆಗಳು ಕೇಳಿಬರುತ್ತಿವೆ.ತಕ್ಷಣಕ್ಕೆಕಚ್ಚಾ ತೈಲ ಉತ್ಪಾದನೆ ಹೆಚ್ಚಿಸುವುದಿಲ್ಲ ಎಂದು ಸೌದಿ ಅರೇಬಿಯಾ ಮತ್ತು ರಷ್ಯಾ ಸ್ಪಷ್ಟಪಡಿಸಿವೆ. ಆದರೆ ಅಮೆರಿಕ ಮಾತ್ರ ಉತ್ಪಾದನೆ ಹೆಚ್ಚಿಸಲು ಎಲ್ಲಾ ದೇಶಗಳೂ ಒಪ್ಪಿಗೆ ನೀಡಿವೆ ಎಂದು ಹೇಳುತ್ತಿದೆ.

‘ಇರಾಕ್‌ನಿಂದ ಆಮದು ಮಾಡಿಕೊಳ್ಳಲು ನೀಡಿದ್ದ ವಿನಾಯ್ತಿ ಕೊನೆಗೊಂಡ ತಕ್ಷಣವೇ ಉತ್ಪಾದನೆ ಹೆಚ್ಚಿಸುವುದಿಲ್ಲ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಿಳಿಸಿದ್ದಾರೆ.ಸೌದಿ ಅರೇಬಿಯಾ ಸಹ ಇದೇ ನಿರ್ಧಾರವನ್ನು ತಳೆದಿದೆ.

‘ಒಂದು ಹಂತದವರೆಗೆ ಉತ್ಪಾದನೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಒಪೆಕ್‌ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದವು ಜುಲೈವರೆಗೂ ಜಾರಿಯಲ್ಲಿರಲಿದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಿಳಿಸಿದ್ದಾರೆ.

ADVERTISEMENT

ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಭಾರತವನ್ನೂ ಒಳಗೊಂಡು 8 ದೇಶಗಳಿಗೆ ಅಮೆರಿಕ ನೀಡಿದ್ದ ವಿನಾಯ್ತಿ ಮೇ2ಕ್ಕೆ ಕೊನೆಗೊಳ್ಳಲಿದೆ. ವಿನಾಯ್ತಿಯನ್ನು ಮತ್ತೆ ವಿಸ್ತರಿಸದೇ ಇರಲು ಅಮೆರಿಕ ನಿರ್ಧರಿಸಿದೆ. ಹೀಗಾಗಿ ಈ ಎಂಟೂ ದೇಶಗಳು ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತಿರುವ ರಫ್ತು ಪ್ರಮಾಣವನ್ನು ಸಂಪೂರ್ಣವಾಗಿ ನಿಲ್ಲಿಸಬೇಕಿದೆ.

ಒಪ್ಪಿಗೆ ನೀಡಿವೆ: ಆದರೆ, ‘ದರ ಏರಿಕೆ ತಗ್ಗಿಸಲು ಉತ್ಪಾದನೆ ಹೆಚ್ಚಿಸುವಂತೆ ಮಾಡಿರುವ ಮನವಿಗೆ ಸೌದಿ ಅರೇಬಿಯಾ ಮತ್ತು ಒಪೆಕ್‌ನ ಇತರೆ ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಿವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

‘ತೈಲ ಮಾರುಕಟ್ಟೆಗೆ ಪೂರೈಕೆ ಹೆಚ್ಚಿಸುವ ಕುರಿತು ಸೌದಿ ಅರೇಬಿಯಾ ಮತ್ತು ಇತರೆ ಉತ್ಪಾದಕ ದೇಶಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಎಲ್ಲರೂ ಒಪ್ಪಿದ್ದಾರೆ’ ಎಂದುಶುಕ್ರವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ರಫ್ತು ಸಂಪೂರ್ಣ ಸ್ಥಗಿತ ಕಷ್ಟ: ಇರಾಕ್‌ನಿಂದ ಕಚ್ಚಾ ತೈಲ ರಫ್ತು ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ಕಷ್ಟ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ, ಇರಾನ್‌ನಿಂದ ಒಂದು ದಿನಕ್ಕೆ 10 ಲಕ್ಷ ಬ್ಯಾರೆಲ್‌ ರಫ್ತಾಗುತ್ತಿದೆ. ಮೇ 2ರ ನಂತರವೂ 4 ಲ‌ಕ್ಷ ಬ್ಯಾರೆಲ್‌ಗಳಿಂದ 5 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ರಫ್ತಾಗಲಿದೆ ಎಂದು ಇಂಧನ ಸಲಹಾ ಸಂಸ್ಥೆ ಎಫ್‌ಜಿಇ ಹೇಳಿದೆ.

ಹೆಚ್ಚಿನ ಪ್ರಮಾಣದ ತೈಲ ಇರಾನ್‌ನಿಂದ ಕಳ್ಳಸಾಗಣೆಯಾಗಲಿದೆ ಅಥವಾ ನಿಷೇಧದ ಹೊರತಾಗಿಯೂ ಚೀನಾಕ್ಕೆ ರವಾನೆಯಾಗಲಿದೆ ಎಂದು ತಿಳಿಸಿದೆ.

*

ವಿನಾಯ್ತಿ ಗಡುವು ಮುಗಿದ ಬಳಿಕ ಜಾಗತಿಕ ಇಂಧನ ಮಾರುಕಟ್ಟೆ ಹೇಗೆ ಪ್ರತಿಕ್ರಿಯೆ ನೀಡಲಿದೆ ಎನ್ನುವುದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ – ವ್ಲಾಡಿಮಿರ್‌ ಪುಟಿನ್, ರಷ್ಯಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.