ನವದೆಹಲಿ: ಓಲಾ ಕಂಪನಿಯ ಇ–ಸ್ಕೂಟರ್ ಸೇವೆಗೆ ಸಂಬಂಧಿಸಿದಂತೆ ಕಂಪನಿಯ ಸಂಸ್ಥಾಪಕ ಭವೀಶ್ ಅರ್ಗವಾಲ್ ಮತ್ತು ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ನಡುವೆ ‘ಎಕ್ಸ್’ನಲ್ಲಿ ಭಾನುವಾರ ವಾಕ್ಸಮರ ನಡೆದಿದೆ.
ಓಲಾದ ಗಿಗಾ ಫ್ಯಾಕ್ಟರಿ ಮುಂದೆ ರಿಪೇರಿಗಾಗಿ ನಿಲುಗಡೆಯಾಗಿರುವ ಇ–ಸ್ಕೂಟರ್‌ಗಳ ಫೋಟೊವೊಂದನ್ನು ಭವೀಶ್ ಅವರು, ತಮ್ಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕಾಮ್ರಾ, ‘ದ್ವಿಚಕ್ರ ವಾಹನಗಳು ದಿನಗೂಲಿ ಕಾರ್ಮಿಕರ ಬದುಕಿನ ಅವಿಭಾಜ್ಯ ಅಂಗವಾಗಿವೆ. ಕಂಪನಿಯು ಕಳಪೆ ಗುಣಮಟ್ಟದ ಸ್ಕೂಟರ್‌ಗಳನ್ನು ಒದಗಿಸುತ್ತಿದೆ. ದೇಶದ ಗ್ರಾಹಕರಿಗೆ ಧ್ವನಿ ಇಲ್ಲವೇ? ಇಂತಹ ಸಮಸ್ಯೆ ಎದುರಿಸುತ್ತಿದ್ದರೆ ಪ್ರತಿಕ್ರಿಯಿಸಬೇಕು’ ಎಂದು ಕೋರಿದ್ದರು.
ಈ ಪೋಸ್ಟ್ ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಅಧಿಕೃತ ‘ಎಕ್ಸ್’ ಖಾತೆಗೂ ಟ್ಯಾಗ್ ಮಾಡಿದ್ದರು. ‘ಇಂತಹ ಸ್ಕೂಟರ್‌ಗಳನ್ನು ಭಾರತೀಯರು ಬಳಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದರು.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ‘ಎಕ್ಸ್’ ಖಾತೆಗೂ ಟ್ಯಾಗ್ ಮಾಡಿದ್ದ ಅವರು. ‘ಇದಕ್ಕೆ ನಿಮ್ಮ ಉತ್ತರ ಏನು’ ಎಂದು ಕೇಳಿದ್ದರು.
ಕಾಮ್ರಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಭವೇಶ್, ‘ನಿಮ್ಮ ಕಾಳಜಿಗೆ ಧನ್ಯವಾದಗಳು. ನೀವು ಬಂದು ನಮಗೆ ಸಹಾಯ ಮಾಡಿ. ನೀವು ದುಡ್ಡಿಗಾಗಿ ಈ ಪ್ರತಿಕ್ರಿಯೆ ನೀಡಿದ್ದೀರಿ’ ಎಂದು ದೂರಿದ್ದಾರೆ.
‘ಜನರನ್ನು ರಂಜಿಸಲು ವಿಫಲವಾಗಿರುವ ನಿಮ್ಮ ಹಾಸ್ಯ ಕಾರ್ಯಕ್ರಮಗಳಿಗಿಂತಲೂ ನಾನು ಹೆಚ್ಚು ಹಣ ಪಾವತಿಸುತ್ತೇನೆ. ಇಲ್ಲವಾದರೆ ನೀವು ಸುಮ್ಮನೆ ಇರಿ. ಗ್ರಾಹಕರ ಸಮಸ್ಯೆ ಪರಿಹರಿಸುವತ್ತ ಗಮನ ಹರಿಸೋಣ. ನಾವು ತ್ವರಿತಗತಿಯಲ್ಲಿ ಸೇವಾ ಜಾಲ ವಿಸ್ತರಿಸುತ್ತಿದ್ದು, ಗ್ರಾಹಕರ ಸಮಸ್ಯೆ ಬಗೆಹರಿಸಲು ಒತ್ತು ನೀಡಿದ್ದೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.