ADVERTISEMENT

ಸಣ್ಣ ವ್ಯಾಪಾರಿಗಳಿಗೆ ಅನುಕೂಲ ‘ಒಎನ್‌ಡಿಸಿ’: ಸಚಿವ ಪೀಯೂಷ್‌ ಗೋಯಲ್‌

ಬೆಂಗಳೂರಿನಲ್ಲಿ ಶುರುವಾಗಿದೆ ಪರೀಕ್ಷಾರ್ಥ ಬಳಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 21:07 IST
Last Updated 18 ನವೆಂಬರ್ 2022, 21:07 IST
ಪೀಯೂಷ್ ಗೋಯಲ್
ಪೀಯೂಷ್ ಗೋಯಲ್   

ಬೆಂಗಳೂರು: ಒಎನ್‌ಡಿಸಿ ವೇದಿಕೆಯು ಇ–ವಾಣಿಜ್ಯ ವಹಿವಾಟುಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಹೇಳಿದರು.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಣ್ಣ ವ್ಯಾಪಾರಿಗಳಿಗೆ ತಮ್ಮಲ್ಲಿನ ಉತ್ಪನ್ನಗಳನ್ನು ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡುವ ಅವಕಾಶವನ್ನು ಈ ವೇದಿಕೆಯು ನೀಡಲಿದೆ. ಹಲವು ಇ–ವಾಣಿಜ್ಯ ವೇದಿಕೆಗಳನ್ನು ಇದು ಒಂದೇ ಸೂರಿನ ಅಡಿ ತರಲಿದೆ. ಗ್ರಾಹಕರು ಯಾವುದೇ ವೇದಿಕೆಯ ಮೂಲಕ ಉತ್ಪನ್ನಗಳನ್ನು ತರಿಸಿಕೊಳ್ಳಬಹುದು’ ಎಂದು ಹೇಳಿದರು.

ಬೆಂಗಳೂರಿನ ಒಎನ್‌ಡಿಸಿ (ಓಪನ್ ನೆಟ್‌ವರ್ಕ್‌ ಫಾರ್ ಡಿಜಿಟಲ್ ಕಾಮರ್ಸ್) ಪರೀಕ್ಷಾರ್ಥವಾಗಿ ಆರಂಭವಾಗಿದ್ದು, ಕೆಲವು ಉತ್ಪನ್ನಗಳನ್ನು ಮಾತ್ರ ತರಿಸಿಕೊಳ್ಳಲು ಸಾಧ್ಯವಿದೆ.‌ ‘ಬೆಂಗಳೂರಿನಲ್ಲಿ ನಡೆದಿರುವ ಪರೀಕ್ಷಾರ್ಥ ಬಳಕೆಯ ವೇಳೆ ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ’ ಎಂದರು.

ADVERTISEMENT

ಈಗ ಒಎನ್‌ಡಿಸಿ ವೇದಿಕೆ ಬಳಕೆ ಮಾಡುತ್ತಿರುವವರಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ದೇಶದ ಪಾವತಿ ವ್ಯವಸ್ಥೆಯಲ್ಲಿ ಏಕೀಕೃತ ಪಾವತಿ ವ್ಯವಸ್ಥೆಯು (ಯುಪಿಐ) ಯಾವ ಬಗೆಯ ಬದಲಾವಣೆಗಳನ್ನು ತಂದಿತೋ ಅದೇ ಬಗೆಯ ಬದಲಾವಣೆಗಳನ್ನು ಇ–ವಾಣಿಜ್ಯ ವಲಯದಲ್ಲಿ ತರುವ ಸಾಮರ್ಥ್ಯವನ್ನು ಒಎನ್‌ಡಿಸಿ ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವ್ಯವಸ್ಥೆಯ ಕೆಲವು ಪ್ರಯೋಜನಗಳು
‘ಈಗಿರುವ ವ್ಯವಸ್ಥೆಯಲ್ಲಿ ಗ್ರಾಹಕರು ನಿರ್ದಿಷ್ಟ ಇ–ವಾಣಿಜ್ಯ ವೇದಿಕೆಯ ಮೂಲಕ, ಆ ವೇದಿಕೆಯ ಜೊತೆ ಒಪ್ಪಂದ ಹೊಂದಿರುವ ವರ್ತಕರಲ್ಲಿನ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಸಾಧ್ಯ. ಅಲ್ಲದೆ, ಆ ವೇದಿಕೆಯು ಗ್ರಾಹಕನಿಗೆ ಹೆಚ್ಚು ಉತ್ತಮವಾದ, ಹೆಚ್ಚು ಸೂಕ್ತವಾದ ಉತ್ಪನ್ನವನ್ನು ತೋರಿಸುತ್ತದೆ ಎನ್ನಲಾಗದು. ಅದರ ಬದಲಿಗೆ, ಆ ವೇದಿಕೆಯು ತಾನು ಬಯಸಿದ ಉತ್ಪನ್ನಗಳನ್ನು ಮಾತ್ರ ಗ್ರಾಹಕರಿಗೆ ತೋರಿಸುತ್ತದೆ’ ಎಂದು ಪೀಯೂಷ್ ಗೋಯಲ್ ವಿವರಿಸಿದರು.

‘ಆದರೆ, ಒಎನ್‌ಡಿಸಿ ಎಲ್ಲ ಇ–ವಾಣಿಜ್ಯ ವೇದಿಕೆಗಳನ್ನೂ ತನ್ನ ಜೊತೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತದೆ. ಒಎನ್‌ಡಿಸಿ ಜಾಲ ಪೂರ್ಣಗೊಂಡ ನಂತರದಲ್ಲಿ ಗ್ರಾಹಕರಿಗೆ ಬೇರೆ ಬೇರೆ ಇ–ವಾಣಿಜ್ಯ ವೇದಿಕೆಗಳಲ್ಲಿನ ಉತ್ಪನ್ನಗಳು ಒಂದೇ ಕಡೆ ಲಭ್ಯವಾಗಲಿವೆ. ಉತ್ಪನ್ನಗಳು ಅತ್ಯಂತ ಸ್ಪರ್ಧಾತ್ಮಕ ದರಲ್ಲಿ ಕೂಡ ಸಿಗಲಿವೆ’ ಎಂದರು.

ಈಗಿನ ಹಲವು ಇ–ವಾಣಿಜ್ಯ ವೇದಿಕೆಗಳಲ್ಲಿ ಇಂಗ್ಲಿಷ್‌ ಮೂಲಕವೇ ವ್ಯವಹರಿಸಬೇಕು. ಆದರೆ ಒಎನ್‌ಡಿಸಿ ಪ್ರಾದೇಶಿಕ ಭಾಷೆಗಳಲ್ಲಿಯೂ ವ್ಯವಹರಿಸುವ ಅವಕಾಶ ಕಲ್ಪಿಸಬಲ್ಲದು ಎಂದು ಒಎನ್‌ಡಿಸಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಟಿ. ಕೋಶಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.