ADVERTISEMENT

ಒಂದು ಬಿಸ್ಕತ್‌ ಕಡಿಮೆ: ಐಟಿಸಿಗೆ ₹1 ಲಕ್ಷ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ

ಪಿಟಿಐ
Published 6 ಸೆಪ್ಟೆಂಬರ್ 2023, 11:57 IST
Last Updated 6 ಸೆಪ್ಟೆಂಬರ್ 2023, 11:57 IST
ಐಟಿಸಿ ಕಂಪನಿ ಲೋಗೊ–ಸಾಂದರ್ಭಿಕ ಚಿತ್ರ
ಐಟಿಸಿ ಕಂಪನಿ ಲೋಗೊ–ಸಾಂದರ್ಭಿಕ ಚಿತ್ರ   

ಚೆನ್ನೈ: ಬಿಸ್ಕತ್‌ ಪೊಟ್ಟಣದ ಮೇಲೆ ನಮೂದಿಸಿದ್ದಕ್ಕಿಂತ ಒಂದು ಬಿಸ್ಕತ್ ಕಡಿಮೆ ಇದೆ ಎಂಬ ಆರೋಪವನ್ನು ಎತ್ತಿ ಹಿಡಿದಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಐಟಿಸಿ ಕಂಪನಿಗೆ ₹1 ಲಕ್ಷ ದಂಡ ವಿಧಿಸಿದೆ.

ಐಟಿಸಿಯು ‘ಸನ್ ಫೀಸ್ಟ್ ಮಾರಿ ಲೈಟ್’ ಬಿಸ್ಕತ್‌ ಪ್ಯಾಕ್‌ನ ಹೊರ ಕವಚದ ಮೇಲೆ 16 ಬಿಸ್ಕತ್‌ ಇರುವುದಾಗಿ ಪ್ರಚಾರ ಮಾಡಿದ್ದು, ಪ್ಯಾಕ್‌ ಒಳಗೆ ಕೇವಲ 15 ಬಿಸ್ಕತ್‌ ನೀಡಿ ಗ್ರಾಹಕರಿಗೆ ಮೋಸ ಮಾಡಿದೆ ಎಂದು ಪಿ.ದಿಲ್ಲಿಬಾಬು ಎಂಬುವವರು ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ₹1 ಲಕ್ಷ ಪರಿಹಾರದ ಜೊತೆ ನಿರ್ದಿಷ್ಟ ಬ್ಯಾಚ್‌ನ (ನಂ.0502C36) ಬಿಸ್ಕತ್‌ ಮಾರಾಟವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.

ADVERTISEMENT

ಏನಿದು ಘಟನೆ?

ಡಿಸೆಂಬರ್ 2021ರಲ್ಲಿ ಬೀದಿ ಬದಿ ಪ್ರಾಣಿಗಳಿಗೆ ಆಹಾರ ನೀಡುವ ಉದ್ದೇಶದಿಂದ ದಿಲ್ಲಿಬಾಬು ಅವರು ಮನಾಲಿಯ ಚಿಲ್ಲರೆ ಅಂಗಡಿಯೊಂದರಿಂದ ಎರಡು ಡಜನ್ 'ಸನ್ ಫೀಸ್ಟ್ ಮಾರಿ ಲೈಟ್' ಬಿಸ್ಕತ್ ಪ್ಯಾಕೆಟ್‌ಗಳನ್ನು ಖರೀದಿಸಿದ್ದರು. ಈ ವೇಳೆ ಪ್ಯಾಕೆಟ್‌ ಮೇಲೆ 16 ಬಿಸ್ಕತ್‌ ಎಂದು ಬರೆದಿದ್ದು, ಪ್ಯಾಕ್‌ ಒಳಗಡೆ 15 ಬಿಸ್ಕತ್‌ ಇರುವುದು ಅವರ ಗಮನಕ್ಕೆ ಬಂದಿತ್ತು.

ಈ ಬಗ್ಗೆ ಕಂಪನಿಯ ಬಳಿ ವಿವರಣೆ ಕೇಳಿದರೂ ಕಂಪನಿ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ ಎಂದು ದಿಲ್ಲಿಬಾಬು ಆರೋಪಿಸಿದ್ದಾರೆ.

ನ್ಯಾಯ ಸಮ್ಮತವಲ್ಲದ ವ್ಯಾಪಾರ ಆರೋಪ ಮಾಡಿದ ಅವರು ಕಂಪನಿ ವಿರುದ್ಧ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದ್ದರು.

‘ಐಟಿಸಿ ಕಂಪನಿ ದಿನಕ್ಕೆ ಸುಮಾರು 50 ಲಕ್ಷ ಬಿಸ್ಕತ್‌ ಪ್ಯಾಕೆಟ್‌ಗಳನ್ನು ಉತ್ಪಾದಿಸುತ್ತಿದೆ. ಪ್ರತಿ ಬಿಸ್ಕತ್‌ ಬೆಲೆ ಸುಮಾರು 75 ಪೈಸೆ ಇದೆ. ಈ ರೀತಿಯ ವ್ಯಾಪಾರ ತಂತ್ರದಿಂದ ಕಂಪನಿ ಪ್ರತಿದಿನ ₹29 ಲಕ್ಷಕ್ಕೂ ಹೆಚ್ಚು ಮೌಲ್ಯದ ವಂಚನೆ ಮಾಡುತ್ತಿದೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ದಿಲ್ಲಿಬಾಬು ಅವರ ದೂರಿಗೆ ಪ್ರತಿಕ್ರಿಯಿಸಿದ ಕಂಪನಿ, ಉತ್ಪನ್ನವನ್ನು ತೂಕದ ಆಧಾರದ ಮೇಲೆ ಮಾತ್ರ ಮಾರಾಟ ಮಾಡಲಾಗಿದೆಯೇ ಹೊರತು ಬಿಸ್ಕತ್‌ಗಳ ಸಂಖ್ಯೆಯನ್ನು ಆಧರಿಸಿಲ್ಲ ಎಂದು ವಾದಿಸಿತ್ತು. ಅಲ್ಲದೇ 15 ಬಿಸ್ಕತ್‌ಗಳ ತೂಕ 76 ಗ್ರಾಂ ಇದೆ ಎಂದು ಪ್ರಚಾರ ಮಾಡಿದ್ದೇವೆ ಎಂದು ಹೇಳಿತ್ತು.

ಪರಿಶೀಲನೆ ವೇಳೆ 15 ಬಿಸ್ಕತ್‌ಗಳ ತೂಕ 74 ಗ್ರಾಂ ಇರುವುದನ್ನು ಗ್ರಾಹಕರ ನ್ಯಾಯಾಲಯ ಕಂಡುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.