ಬೆಂಗಳೂರು: ಜಾಗತಿಕ ತಂತ್ರಜ್ಞಾನ ಕಂಪನಿ ಆಗಿರುವ ಒನ್‌ಪ್ಲಸ್, ಬೆಂಗಳೂರಿನ ಬ್ರಿಗೆಡ್ ರಸ್ತೆಯ ಬಳಿ 39 ಸಾವಿರ ಚದರ ಅಡಿ ವಿಸ್ತೀರ್ಣದ, ವಿಶ್ವದ ಅತಿದೊಡ್ಡ ಎಕ್ಸ್‌ಪೀರಿಯನ್ಸ್ ಸೆಂಟರ್ ‘ಒನ್‌ಪ್ಲಸ್ ಬುಲೆವಾರ್ಡ್’ ಆರಂಭಿಸಿದೆ. ಈ ಮಳಿಗೆಗಾಗಿ ₹ 40 ಕೋಟಿ ವೆಚ್ಚ ಮಾಡಲಾಗಿದೆ ಎಂದು ಕಂಪನಿಯು ತಿಳಿಸಿದೆ.
ವರ್ಚುವಲ್ ವೇದಿಕೆಯ ಮೂಲಕ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕಂಪನಿಯ ಭಾರತದ ಸಿಇಒ ನವ್‌ನೀತ್ ನಕ್ರಾ ಅವರು ಬುಲೆವಾರ್ಡ್ ಉದ್ಘಾಟಿಸಿದರು. ‘ಒನ್‌ಪ್ಲಸ್ ಬುಲೆವಾರ್ಡ್ ಕೇವಲ ರಿಟೇಲ್ ಮಳಿಗೆ ಆಗಿರದೆ ನಮ್ಮ ಸಮುದಾಯದ ಸದಸ್ಯರ ಕೇಂದ್ರವಾಗಿಯೂ ಇರಲಿದೆ. ಗ್ರಾಹಕರು ಬ್ರ್ಯಾಂಡ್‌ನೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಅನುವು ಮಾಡಿಕೊಡಲಿದೆ. ಭಾರತದಲ್ಲಿ ಒನ್‌ಪ್ಲಸ್ ಪಯಣ ಆರಂಭ ಆಗಿದ್ದು ಬೆಂಗಳೂರಿನಲ್ಲಿಯೇ. ಹಾಗಾಗಿ ಜಗತ್ತಿನ ಅತಿದೊಡ್ಡ ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಮಳಿಗೆಯನ್ನು ಇಲ್ಲಿ ಆರಂಭಿಸಲಾಗಿದೆ’ ಎಂದು ಅವರು ಹೇಳಿದರು.
ಗ್ರಾಹಕರಿಗೆ ಒನ್‌ಪ್ಲಸ್ ಬ್ರ್ಯಾಂಡ್‌ನೊಂದಿಗೆ ಹೆಚ್ಚು ಹತ್ತಿರವಾಗಲು ಈ ಮಳಿಗೆ ನೆರವಾಗಲಿದೆ. ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಒಳಗೊಂಡು ಕಂಪನಿಯ ಎಲ್ಲಾ ಉತ್ಪನ್ನಗಳನ್ನೂ ಇಲ್ಲಿ ಕಾಣಬಹುದು. ಗೇಮಿಂಗ್ ಜೋನ್, ಆಡಿಟೋರಿಯಂ, ಸಿಗ್ನೆಜರ್ ಕಾಫಿ ಜೋನ್, ಅನ್‌ಬಾಕ್ಸಿಂಗ್ ಜೋನ್, ಗ್ರಾಹಕ ಸೇವಾ ಕೇಂದ್ರಗಳನ್ನು ಇದು ಒಳಗೊಂಡಿದೆ ಎಂದು ಕಂಪನಿ ಹೇಳಿದೆ.
ಈ ವರ್ಷದ ಅಂತ್ಯದೊಳಗೆ ಒಟ್ಟಾರೆ 15 ಸಾವಿರಕ್ಕೂ ಅಧಿಕ ಆಫ್‌ಲೈನ್ ಮಳಿಗೆಗಳನ್ನು ಹೊಂದುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.