ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) 2023–24ನೇ ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು ₹9,869 ಕೋಟಿ ನಿವ್ವಳ ಲಾಭಗಳಿಸಿದೆ.
2022–23ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ನಿಗಮವು ₹528 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ 19 ಪಟ್ಟು ಹೆಚ್ಚಳವಾಗಿದೆ ಎಂದು ಕಂಪನಿಯು, ಷೇರುಪೇಟೆಗೆ ತಿಳಿಸಿದೆ.
ಕಚ್ಚಾ ತೈಲದ ಉತ್ಪಾದನೆಯಲ್ಲಿ ಶೇ 4.3ರಷ್ಟು ಹೆಚ್ಚಳವಾಗಿದ್ದು, 47.1 ಲಕ್ಷ ಟನ್‌ಗೆ ಮುಟ್ಟಿದೆ. ಕಚ್ಚಾ ತೈಲದ ಬೆಲೆಯು 2023ರ ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಪ್ರತಿ ಬ್ಯಾರೆಲ್‌ಗೆ 77.12 ಡಾಲರ್ (₹6,426) ಇದ್ದರೆ, ಪ್ರಸಕ್ತ ವರ್ಷದ ಮಾರ್ಚ್ ವೇಳೆಗೆ 80.81 ಡಾಲರ್‌ಗೆ (₹6,733) ಏರಿಕೆಯಾಗಿತ್ತು ಎಂದು ತಿಳಿಸಿದೆ.
2023–24ರ ಪೂರ್ಣ ಹಣಕಾಸು ವರ್ಷದಲ್ಲಿ ನಿವ್ವಳ ಲಾಭವು ₹40,097 ಕೋಟಿಯಿಂದ ₹40,526 ಕೋಟಿಗೆ ಏರಿಕೆಯಾಗಿದೆ. ವರಮಾನವು ₹1.55 ಲಕ್ಷ ಕೋಟಿಯಿಂದ ₹1.38 ಲಕ್ಷ ಕೋಟಿಗೆ ಇಳಿಕೆಯಾಗಿದೆ.
ಕಂಪನಿಯು ಪ್ರತಿ ಷೇರಿಗೆ ಶೇ 245ರಷ್ಟು ಲಾಭಾಂಶ ನೀಡಲು ನಿರ್ಧರಿಸಿದೆ. ಇದಕ್ಕಾಗಿ ₹15,411 ಕೋಟಿ ನಿಗದಿಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.