ಬೆಂಗಳೂರು: ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ₹15,206 ಕೋಟಿ ನಿವ್ವಳ ಲಾಭ ಗಳಿಸಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹4,334 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಮೂರು ಪಟ್ಟು ಹೆಚ್ಚಾಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲೆ ಕೇಂದ್ರ ಸರ್ಕಾರವು ಆಕಸ್ಮಿಕ ಲಾಭ ತೆರಿಗೆ ವಿಧಿಸುವುದಕ್ಕೂ ಮುನ್ನ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಹೆಚ್ಚಾಗಿದ್ದರಿಂದ ಕಂಪನಿಯ ಗಳಿಕೆಯಲ್ಲಿ ಭಾರಿ ಏರಿಕೆ ಕಂಡಿದೆ. ಕಂಪನಿಯ ವರಮಾನ ₹ 23,022 ಕೋಟಿಯಿಂದ ₹ 42,321 ಕೋಟಿಗೆ ಏರಿಕೆ ಆಗಿದೆ.
ಕಚ್ಚಾ ತೈಲ ಉತ್ಪಾದನೆ ಶೇ 1.9ರಷ್ಟು ಮತ್ತು ಅನಿಲ ಉತ್ಪಾದನೆ ಶೇ 1.4ರಷ್ಟು ಏರಿಕೆ ಕಂಡಿದೆ ಎಂದು ಕಂಪನಿಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.