ADVERTISEMENT

ಒಎನ್‌ಜಿಸಿ ಲಾಭ ಶೇ 20ರಷ್ಟು ಇಳಿಕೆ

ಕಚ್ಚಾ ತೈಲ ದರ ಇಳಿಕೆ, ತಗ್ಗಿದ ಉತ್ಪಾದನೆ ಪರಿಣಾಮ

ಪಿಟಿಐ
Published 11 ನವೆಂಬರ್ 2023, 13:04 IST
Last Updated 11 ನವೆಂಬರ್ 2023, 13:04 IST
ಒಎನ್‌ಜಿಸಿ
ಒಎನ್‌ಜಿಸಿ   

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಮಗವು (ಒಎನ್‌ಜಿಸಿ) ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹10,216 ಕೋಟಿ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹12,826 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 20ರಷ್ಟು ಇಳಿಕೆ ಕಂಡಿದೆ. ಜೂನ್ ತ್ರೈಮಾಸಿಕದಲ್ಲಿಯೂ ಕಂಪನಿಯ ಲಾಭ ಶೇ 34ರಷ್ಟು ಇಳಿಕೆ ಆಗಿತ್ತು. 

ತೈಲ ದರ ಇಳಿಕೆ ಮತ್ತು ಉತ್ಪಾದನೆ ಕಡಿಮೆ ಆಗಿರುವುದರಿಂದ ಲಾಭದಲ್ಲಿ ಇಳಿಕೆ ಆಗಿದೆ ಎಂದು ಕಂಪನಿ ಹೇಳಿದೆ. ರಷ್ಯಾ–ಉಕ್ರೇನ್‌ ಸಂಘರ್ಷ ಆರಂಭ ಆದ ಬಳಿಕ 2022ರ ಏಪ್ರಿಲ್‌–ಜೂನ್ ಅವಧಿಯಲ್ಲಿ ಜಾಗತಿಕವಾಗಿ ಕಚ್ಚಾ ತೈಲ ದರ ತೀವ್ರ ಏರಿಕೆ ಕಂಡಿತು. ಆದರೆ, ಈ ವರ್ಷ ಕಚ್ಚಾ ತೈಲ ದರ ಇಳಿಕೆ ಕಂಡಿದ್ದು ಎರಡನೇ ತ್ರೈಮಾಸಿಕದಲ್ಲಿ ಬ್ಯಾರಲ್‌ಗೆ 80–90 ಡಾಲರ್‌ ಮಟ್ಟದಲ್ಲಿ ಇದೆ.

ADVERTISEMENT

ಕಂಪನಿ ಉತ್ಪಾದನೆ ಮಾಡಿದ ಕಚ್ಚಾ ತೈಲ ಮಾರಾಟದಿಂದ ಪ್ರತಿ ಬ್ಯಾರಲ್‌ಗೆ ಬರುವ ಗಳಿಕೆಯು ಕಡಿಮೆ ಆಗಿದೆ ಎಂದು ಅದು ಹೇಳಿದೆ. ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಪ್ರತಿ ಬ್ಯಾರಲ್‌ಗೆ 95.50 ಡಾಲರ್‌ (₹7,926) ಸಿಕ್ಕಿತ್ತು. ಆದರೆ, ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಪ್ರತಿ ಬ್ಯಾರಲ್‌ಗೆ 84.84 ಡಾಲರ್‌ (₹7,042) ಬಂದಿದೆ  ಎಂದು ತಿಳಿಸಿದೆ.

ಸರಾಸರಿ ವರಮಾನವು ಶೇ 8.2ರಷ್ಟು ಇಳಿಕೆ ಆಗಿ ₹35,162 ಕೋಟಿಗೆ ತಲುಪಿದೆ. ಕಚ್ಚಾ ತೈಲ ಉತ್ಪಾದನೆಯು ಶೇ 1.9ರಷ್ಟು ಕಡಿಮೆ ಆಗಿದ್ದು 45.5 ಲಕ್ಷ ಟನ್‌ನಷ್ಟು ಉತ್ಪಾದನೆ ಆಗಿದೆ. ಅನಿಲ ಉತ್ಪಾದನೆ ಶೇ 3ರಷ್ಟು ಕಡಿಮೆ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.