ADVERTISEMENT

ಕಚ್ಚಾ ತೈಲ ಉತ್ಪಾದನೆ ಶೀಘ್ರ: ಸಮುದ್ರದಾಳದ ಈ ಯೋಜನೆಗೆ ₹4.22 ಲಕ್ಷ ಕೋಟಿ ವೆಚ್ಚ

ಪಿಟಿಐ
Published 13 ನವೆಂಬರ್ 2023, 14:07 IST
Last Updated 13 ನವೆಂಬರ್ 2023, 14:07 IST
<div class="paragraphs"><p>ಒಎನ್‌ಜಿಸಿ</p></div>

ಒಎನ್‌ಜಿಸಿ

   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಪ್ರಸಕ್ತ ತಿಂಗಳಿನಿಂದಲೇ ಬಂಗಾಳ ಕೊಲ್ಲಿಯ ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶದ ಆಳ ಸಮುದ್ರದಲ್ಲಿ ಕಚ್ಚಾ ತೈಲ ಉತ್ಪಾದನಾ ಕಾರ್ಯ ಆರಂಭಿಸಲು ಸಿದ್ಧತೆ ನಡೆಸಿದೆ.

‘ಕ್ಲಸ್ಟರ್–2ರಲ್ಲಿ ಉತ್ಪಾದನಾ ಚಟುವಟಿಕೆ ಆರಂಭಿಸಲು ಯೋಜನೆ ರೂಪಿಸಿದ್ದೇವೆ. ನಿಧಾನವಾಗಿ ಉತ್ಪಾದನಾ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೆಲವು ವರ್ಷಗಳಿಂದ ತೈಲೋತ್ಪಾದನೆಯಲ್ಲಿ ಆಗಿರುವ ಕುಸಿತ ಸರಿದೂಗಿಸಲು ಇದರಿಂದ ನೆರವಾಗಲಿದೆ’ ಎಂದು ಒಎನ್‌ಜಿಸಿ ನಿರ್ದೇಶಕ (ಉತ್ಪಾದನೆ) ಪಂಕಜ್‌ ಕುಮಾರ್‌ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಕಚ್ಚಾ ತೈಲ ಸಂಸ್ಕರಿಸಿ ಅದನ್ನು ಟ್ಯಾಂಕರ್‌ಗೆ ವರ್ಗಾಯಿಸಲು ಬಳಸುವ ತೇಲುವ (ಎಫ್‌ಸಿಎಸ್‌ಒ) ಘಟಕಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಈಗಾಗಲೇ, ಈ ಬ್ಲಾಕ್‌ನಲ್ಲಿ ಇಂತಹ ಘಟಕವೊಂದು ಕಾರ್ಯ ನಿರ್ವಹಿಸುತ್ತಿದೆ. 

2018ರಲ್ಲಿ ಆರಂಭಗೊಂಡ ಈ ಯೋಜನೆಯ ಒಟ್ಟು ಅಂದಾಜು ಮೊತ್ತ ₹ 4.22 ಲಕ್ಷ ಕೋಟಿ ಆಗಿದೆ. 2021ರ ನವೆಂಬರ್‌ನಿಂದ ಇಲ್ಲಿ ತೈಲ ಉತ್ಪಾದನೆ ಆರಂಭ ಆಗಬೇಕಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದಿಂದಾಗಿ ವಿಳಂಬವಾಗಿತ್ತು. 

‘ಆರಂಭದಲ್ಲಿ 3ರಿಂದ 4 ಬಾವಿಗಳಲ್ಲಿ ಕಚ್ಚಾ ತೈಲವನ್ನು ಹೊರತೆಗೆಯಲಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ದಿನವೊಂದಕ್ಕೆ 8 ಸಾವಿರದಿಂದ 9 ಸಾವಿರ ಬ್ಯಾರಲ್‌ ತೈಲ ಉತ್ಪಾದನೆಗೆ ನಿರ್ಧರಿಸಲಾಗಿದೆ’ ಎಂದು ಕುಮಾರ್‌ ತಿಳಿಸಿದ್ದಾರೆ.

ಕೃಷ್ಣಾ ಗೋದಾವರಿಯ ಆಳ ಸಮುದ್ರದಲ್ಲಿ ಉತ್ಪಾದನಾ ಚಟುವಟಿಕೆಯು ಪ್ರಯಾಸಕರವಾಗಿದೆ. ಈ ಬಗ್ಗೆ ನಿಗಮಕ್ಕೂ ಅರಿವಿದೆ. ಒಎನ್‌ಜಿಸಿ ಕ್ಲಸ್ಟರ್‌ಗಳ ಸಮೀಪದಲ್ಲಿಯೇ ರಿಲಯನ್ಸ್ ಕಂಪನಿಯೂ ಕಾರ್ಯ ನಿರ್ವಹಿಸುತ್ತಿದೆ. ಉತ್ಪಾದನೆ ಕಾರ್ಯದ ವೇಳೆ ಅದು ಎಸಗುತ್ತಿರುವ ಪುನರಾವರ್ತಿತ ತಪ್ಪುಗಳನ್ನು ತಾನು ಎಸಗದಂತೆ ಎಚ್ಚರವಹಿಸಲು ಒಎನ್‌ಜಿಸಿ ನಿರ್ಧರಿಸಿದೆ.

ಈ ಪ್ರದೇಶದಲ್ಲಿ ಅನಿಲ ಉತ್ಪಾದನೆಯು ಸಂಕೀರ್ಣವಾಗಿಲ್ಲ. ಮರಳು ಹಾಗೂ ನೀರು ತೈಲ ಬಾವಿ ಪ್ರವೇಶಿಸಿದರಷ್ಟೇ ತೈಲ ಪೂರೈಕೆಯ ಕವಾಟುಗಳು ಬಹುಬೇಗ ತೆರೆದುಕೊಳ್ಳುತ್ತವೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಬಾವಿಗಳನ್ನು ಕೊರೆಯುವ ವಿಧಾನ ಅನುಸರಿಸುತ್ತೇವೆ. ನಿಗದಿತ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸುತ್ತೇವೆ. ಹೆಚ್ಚಿನ ಪ್ರಮಾಣದಲ್ಲಿ ತೈಲ ಉತ್ಪಾದನೆಯ ಉದ್ದೇಶ ಹೊಂದಿಲ್ಲ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಇಲ್ಲಿ ಉತ್ಪಾದಿಸುವ ಕಚ್ಚಾ ತೈಲವನ್ನು ಹಡಗಿನ ಮೂಲಕ ಮಂಗಳೂರಿನ ಎಂಆರ್‌ಪಿಎಲ್‌ಗೆ ಹಡಗಿನ ಮೂಲಕ ರವಾನಿಸಲಾಗುತ್ತದೆ. ಅಲ್ಲಿ ಅದರ ಪರೀಕ್ಷೆ ನಡೆಯಲಿದೆ. ಅದರ ಗುಣಮಟ್ಟದ ಆಧಾರದ ಮೇಲೆ ಗ್ರೇಡ್‌ ಹಾಗೂ ದರ ನಿರ್ಧರಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.