ADVERTISEMENT

ಕಿರಾಣಿ ಅಂಗಡಿಗೆ ‘ಆನ್‌ಗೊ’ ನೆರವು

​ಕೇಶವ ಜಿ.ಝಿಂಗಾಡೆ
Published 7 ಜುಲೈ 2020, 19:30 IST
Last Updated 7 ಜುಲೈ 2020, 19:30 IST
   
""

ಕೋವಿಡ್‌ ಸಂದರ್ಭದಲ್ಲಿ ಕಿರಾಣಿ ವರ್ತಕರು, ಸಣ್ಣ ಉದ್ಯಮಿಗಳು ತಂತ್ರಜ್ಞಾನ ನೆರವಿನಿಂದ ವಹಿವಾಟು ವಿಸ್ತರಿಸಲು ನೆರವಾಗುವ ಡಿಜಿಟಲ್‌ ತಂತ್ರಜ್ಞಾನ ಸೌಲಭ್ಯವನ್ನು ಆನ್‌ಗೊ ರಿಟೇಲ್‌ ಕಂಪನಿ ಒದಗಿಸುತ್ತಿದೆ.

ಗೃಹಿಣಿಯೊಬ್ಬರು ಮೊಬೈಲ್‌ ಮೂಲಕ ಮನೆ ಸಮೀಪದ ಕಿರಾಣಿ ಅಂಗಡಿಗೆ ಕರೆ ಮಾಡಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಓದಿ ಹೇಳುತ್ತಾರೆ. ಮಳಿಗೆಯ ಅಪ್ಲಿಕೇಷನ್‌ನಲ್ಲಿ ಅದೆಲ್ಲ ದಾಖಲಾಗುತ್ತದೆ. ಮಾಲೀಕ ಆ ಪಟ್ಟಿ ಆಧರಿಸಿ ದಿನಸಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಾನೆ. ಗೃಹಿಣಿಯು ಆ್ಯಪ್ ಮೂಲಕ ಹಣ ಪಾವತಿಸುತ್ತಾರೆ. ಕೋವಿಡ್‌ ಕಾರಣಕ್ಕೆ ಅಂತರ ಕಾಯ್ದುಕೊಳ್ಳುವಿಕೆ, ಸುರಕ್ಷತೆಯಿಂದ ಇರುವುದೂ ಸಾಧ್ಯವಾಗಲಿದೆ. ಕಿರಾಣಿ ವರ್ತಕರ ವಹಿವಾಟೂ ವಿಸ್ತರಣೆಯಾಗಲಿದೆ.

ಕಿರಾಣಿ ಅಂಗಡಿಗಳಂತಹ ಸಣ್ಣ, ಪುಟ್ಟ ವರ್ತಕರೂ ಇದೇ ಬಗೆಯಲ್ಲಿ ತಮ್ಮ ವಹಿವಾಟಿಗೆ ತಂತ್ರಜ್ಞಾನ ಬಳಸುವುದರತ್ತ ಈಗ ಗಮನ ಹರಿಸುತ್ತಿದ್ದಾರೆ. ಡಿಜಿಟಲ್‌ ಸೇವೆ ಒದಗಿಸುವ ಆನ್‌ಗೊ ಫ್ರೇಮ್‌ವರ್ಕ್‌ (ONGO Framework) ಕಂಪನಿಯು, ರಿಟೇಲ್‌ ವರ್ತಕರ ಅನುಕೂಲಕ್ಕಾಗಿ ಆನ್‌ಗೊ ರಿಟೇಲ್‌ (ONGO Retail) ಡಿಜಿಟಲ್‌ ತಂತ್ರಜ್ಞಾನದ ಸೌಲಭ್ಯ ಅಳವಡಿಸಿಕೊಡಲಿದೆ.

ADVERTISEMENT

ಕೋವಿಡ್‌ ಪಿಡುಗಿನ ದಿನಗಳಲ್ಲಿ ಗ್ರಾಹಕರು ತಮ್ಮೆಲ್ಲ ಅಗತ್ಯಗಳಿಗಾಗಿ ದೂರದ ಸೂಪರ್‌ಮಾರ್ಕೆಟ್‌ಗಳಿಗೆ ತೆರಳುವ ಪ್ರವೃತ್ತಿ ಕೈಬಿಡುತ್ತಿದ್ದಾರೆ. ಮನೆ ಸಮೀಪದ ಮಳಿಗೆಗಳಲ್ಲಿಯೇ ದಿನಬಳಕೆಯ ಸರಕುಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಇನ್ನೊಂದೆಡೆ ಇ–ಕಾಮರ್ಸ್‌ ದೈತ್ಯ ಮಳಿಗೆಗಳು ದಿನಸಿ ಸೇರಿದಂತೆ ದಿನಬಳಕೆಯ ಅಗತ್ಯ ಸರಕುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಪೈಪೋಟಿ ನಡೆಸುತ್ತಿವೆ. ಇಂತಹ ತೀವ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಂಡು ವಹಿವಾಟು ವಿಸ್ತರಿಸಲು ಕಿರಾಣಿ ಅಂಗಡಿಗಳ ಮಾಲೀಕರು ತಂತ್ರಜ್ಞಾನದ ನೆರವು ಪಡೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ವಹಿವಾಟು ಹೆಚ್ಚಿಸಲು ನೆರವಾಗುವ ಡಿಜಿಟಲ್‌ ತಂತ್ರಜ್ಞಾನ ಸೌಲಭ್ಯ ಒದಗಿಸಿ, ಅದನ್ನು ಸಮರ್ಪಕವಾಗಿ ನಿರ್ವಹಿಸುವ ತಂತ್ರಜ್ಞಾನ ಕಂಪನಿಗಳ ಸೇವೆಗಳತ್ತ ಗಮನ ಹರಿಸುತ್ತಿದ್ದಾರೆ. ಸದ್ಯದ ಅನಿಶ್ಚಿತ ಪರಿಸ್ಥಿತಿಯಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ ತಮ್ಮ ವಹಿವಾಟಿನ ವಿಸ್ತರಣೆಗೆ ಡಿಜಿಟಲ್‌ ತಂತ್ರಜ್ಞಾನದ ಪ್ರಯೋಜನ ಪಡೆಯಲು ಮುಂದಾಗಿವೆ.

ಕೋವಿಡ್‌ ಮುಂಚೆ ಕಿರಾಣಿ ಅಂಗಡಿಗಳವರೆಗೆ ಗ್ರಾಹಕರನ್ನು ತಲುಪಲು ತಂತ್ರಜ್ಞಾನದ ಹೆಚ್ಚಿನ ಅಗತ್ಯ ಇದ್ದಿರಲಿಲ್ಲ. ಗ್ರಾಹಕರನ್ನು ಸೆಳೆಯಲು ತಂತ್ರಜ್ಞಾನದ ಮೊರೆ ಹೋಗುವುದು ಅವರಿಗೂ ಈಗ ಅನಿವಾರ್ಯವಾಗಿದೆ. ಕಿರಾಣಿ ಅಂಗಡಿ ಮಾಲೀಕ ತನ್ನದೇ ಆದ ಅಂತರ್ಜಾಲ ತಾಣ ಮತ್ತು ಮೊಬೈಲ್‌ ಆ್ಯಪ್‌ ರೂಪಿಸಿ ಗ್ರಾಹಕರನ್ನು ಸೆಳೆಯುವುದನ್ನು ಆನ್‌ಗೊ ರಿಟೇಲ್‌ ಅಪ್ಲಿಕೇಷನ್‌ ಸುಲಭಗೊಳಿಸಲಿದೆ.

ಕಿರಾಣಿ ಅಂಗಡಿ, ಸೂಪರ್‌ ಮಾರ್ಕೆಟ್‌ಗಳ ವ್ಯಾಪಾರ ಹೆಚ್ಚಿಸಲು, ಗ್ರಾಹಕರಿಗೆ ಸುಲಭವಾಗಿ ಅಗತ್ಯವಸ್ತುಗಳನ್ನು ಪೂರೈಸಲು, ವಹಿವಾಟಿನ ಐ.ಟಿ ಸೇವೆ ಒದಗಿಸಲು ಮತ್ತು ಉದ್ಯಮದ ನಿರ್ದಿಷ್ಟ ಗುರಿಗಳನ್ನು ಈಡೇರಿಸಿಕೊಳ್ಳಲು ಈ ತಂತ್ರಜ್ಞಾನ ನೆರವಾಗಲಿದೆ. ಅಡೆತಡೆ ಇಲ್ಲದೆ ವಹಿವಾಟು ನಡೆಸಲು ನೆರವಾಗುವ ಅಪ್ಲಿಕೇಷನ್‌ ಕೂಡ ಲಭ್ಯ ಇದೆ.

‘ಉತ್ಪನ್ನಗಳ ಮಾರಾಟಕ್ಕೆ ಇ–ಕಾಮರ್ಸ್‌ ಕಂಪನಿಗಳನ್ನೇ ನೆಚ್ಚಿಕೊಂಡಿದ್ದ ಸ್ಥಳೀಯ ಬ್ರ್ಯಾಂಡ್‌ಗಳು ವಹಿವಾಟು ವಿಸ್ತರಿಸಲು ತಮ್ಮದೇ ಆದ ತಂತ್ರಜ್ಞಾನ ಅಳವಡಿಸಿಕೊಳ್ಳಲು ಆಸಕ್ತಿ ತೋರಿಸುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನಗಳಾದ ಕಾಗ್ನಿಟಿವ್‌ ಕಂಪ್ಯೂಟಿಂಗ್‌, ಕೃತಕ ಬುದ್ಧಿಮತ್ತೆ (ಎಐ), ಮಷಿನ್‌ ಲರ್ನಿಂಗ್‌ ಅವುಗಳ ನೆರವಿಗೆ ಬರುತ್ತಿದೆ. ಇದರಿಂದ ಗ್ರಾಹಕರ ಜತೆ ಡಿಜಿಟಲ್‌ ಸಂವಹನ ಸಾಧ್ಯವಾಗಲಿದೆ. ಕ್ಲೌಡ್‌ ಆಧಾರಿತ ಐ.ಟಿ ಮೂಲ ಸೌಕರ್ಯ ಅಳವಡಿಸಲಾಗುವುದು‘ ಎಂದು ಕಂಪನಿಯ ಸಿಇಒ ರಾಮಾ ಕುಪ್ಪಾ ಹೇಳುತ್ತಾರೆ.

ರಿಟೇಲ್‌ ವಹಿವಾಟು, ಶಿಕ್ಷಣ ಸಂಸ್ಥೆಗಳು, ಆರೋಗ್ಯ (ಆಸ್ಪತ್ರೆ, ಟೆಲಿಮೆಡಿಸಿನ್‌) ವಲಯ, ರೆಸ್ಟೊರೆಂಟ್‌ ಹಾಗೂ ಸ್ಪಾ, ಸಲೂನ್‌, ಪ್ಲಂಬರ್‌ ಮುಂತಾದವುಗಳ ಸೇವಾ ವಲಯದ ಮಳಿಗೆಗಳು ನೈರ್ಮಲ್ಯ, ಸುರಕ್ಷತೆ, ಅಂತರ ಕಾಯ್ದುಕೊಳ್ಳುವಿಕೆ ಮತ್ತಿತರ ಕಾರಣಗಳಿಗೆ ತಮ್ಮೆಲ್ಲ ವಹಿವಾಟಿಗೆ ಡಿಜಿಟಲ್‌ ಸ್ಪರ್ಶ ನೀಡಲು ಮುಂದಾಗಿವೆ. ಆನ್‌ಗೊ ಫ್ರೇಮ್‌ವರ್ಕ್‌ ಕಂಪನಿಯು ಈ ಎಲ್ಲ ಬಗೆಯ ವಹಿವಾಟುದಾರರ ಡಿಜಿಟಲ್‌ ಅಗತ್ಯಗಳನ್ನು ಒದಗಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಆನ್‌ಗೊ ರಿಟೇಲ್‌ ಡಾಟ್‌ಕಾಂ, ಆನ್‌ಗೊ ಹೆಲ್ತ್‌ಡಾಟ್‌ಇನ್‌ – ಹೀಗೆ 5 ವಿಭಿನ್ನ ವಲಯಗಳಿಗೆ ಕಂಪನಿಯು ತಂತ್ರಜ್ಞಾನ ಸೌಲಭ್ಯ ಒದಗಿಸಿಕೊಡಲಿದೆ. ಶಿಕ್ಷಣ ಸಂಸ್ಥೆಗಳು– ಶಿಕ್ಷಕ ಮತ್ತು ವಿದ್ಯಾರ್ಥಿ ಮಧ್ಯೆ ಸಂಪರ್ಕ ಸೇತುವೆಯಾಗುವ ಡಿಜಿಟಲ್‌ ವೇದಿಕೆ ಬಳಸುವುದನ್ನೂ ಈ ಕಂಪನಿ ಸುಲಭಗೊಳಿಸಲಿದೆ. ‘ಚಾಟ್‌ ಮಾಡೆಲ್‌’ ಮೂಲಕ ಪರಸ್ಪರ ಸಂವಾದದ ವೇದಿಕೆ ಕಲ್ಪಿಸಿಕೊಡಲಿದೆ.

ಅಂತರ್ಜಾಲ ತಾಣ ನಿರ್ಮಾಣ, ಮೊಬೈಲ್‌ ಅಪ್ಲಿಕೇಷನ್‌ ಸಿದ್ಧಪಡಿಸುವಿಕೆ, ಖರೀದಿ, ಪೂರೈಕೆ, ಹಣ ಪಾವತಿ ಮತ್ತಿತರ ವಹಿವಾಟಿಗೆ ಅನುಕೂಲಕರವಾದ ಸೌಲಭ್ಯಗಳನ್ನೆಲ್ಲ ಈ ಅಪ್ಲಿಕೇಷನ್‌ ಒಳಗೊಂಡಿರಲಿದೆ. ಇದನ್ನು ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಅಳವಡಿಸಬಹುದು. ಈ ತಂತ್ರಜ್ಞಾನ ಅಳವಡಿಕೆಯಿಂದ ವಹಿವಾಟುದಾರರು ಹೆಚ್ಚು ಗ್ರಾಹಕರನ್ನು ತಲುಪಲು ಸಾಧ್ಯವಾಗಲಿದೆ. ಈ ಡಿಜಿಟಲ್‌ ತಂತ್ರಜ್ಞಾನದ ಸೇವೆ ಪಡೆದ ಗ್ರಾಹಕರು ಪ್ರತಿ ತಿಂಗಳಿಗೆ ₹ 2,000ರಂತೆ ಇಲ್ಲವೆ ವರಮಾನದಲ್ಲಿ ಶೇ 2ರಷ್ಟು ಲಾಭದ ರೂಪದಲ್ಲಿ ಶುಲ್ಕ ಪಾವತಿಸಬೇಕಾಗುತ್ತದೆ.

‘ಅನೇಕ ಉದ್ಯಮಗಳಲ್ಲಿ ಈ ತಂತ್ರಜ್ಞಾನ ಬಳಕೆ ಇದೆ. ಅದರ ಉಪಯುಕ್ತತೆಯನ್ನು ಕಿರಾಣಿ ಅಂಗಡಿಗಳಿಗೆ ಮತ್ತು ಎಂಎಸ್‌ಎಂಇ ವಲಯಕ್ಕೂ ವಿಸ್ತರಿಸಲು ಕಂಪನಿಯು ಈಗ ಕಾರ್ಯಪ್ರವೃತ್ತವಾಗಿದೆ. ಸದ್ಯಕ್ಕೆ ಕಾಡುತ್ತಿರುವ ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳಿಗೂ ಇದರ ಉಪಯುಕ್ತತೆ ಹೆಚ್ಚಿದೆ. ಅಂಗಡಿಯಲ್ಲಿ ಲಭ್ಯ ಇರುವ ಉತ್ಪನ್ನಗಳ ವಿವರವೆಲ್ಲ ಒದಗಿಸಿ ಸ್ಥಳೀಯ ಗ್ರಾಹಕರನ್ನು ಸುಲಭವಾಗಿ ಸೆಳೆಯಬಹುದು. ಇ–ಕಾಮರ್ಸ್‌ನ ಪ್ರಮುಖ ಕಂಪನಿಗಳು ಒದಗಿಸುವ ಸೇವೆಯನ್ನೇ ಕಿರಾಣಿ ಅಂಗಡಿ ಮಾಲೀಕರು ಒದಗಿಸಿ ತಮ್ಮ ವಹಿವಾಟನ್ನು ಹೆಚ್ಚಿಸಿಕೊಳ್ಳಬಹುದು.

‘ಸ್ಥಳೀಯ ಭಾಷೆಗಳಲ್ಲಿಯೂ ಈ ಸೌಲಭ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಒಂದು ತಿಂಗಳವರೆಗೆ ಪ್ರಾಯೋಗಿಕ ಮತ್ತು ಉಚಿತ ಬಳಕೆಯ ಸೌಲಭ್ಯ ಕಲ್ಪಿಸಲಾಗುವುದು. ರಾಜ್ಯದಲ್ಲಿ ಏಪ್ರಿಲ್‌ನಲ್ಲಿ ಆರಂಭಿಸಿರುವ ಈ ಸೌಲಭ್ಯಕ್ಕೆ ಬೆಂಗಳೂರು, ಬೆಳಗಾವಿ, ಮೈಸೂರು ಮತ್ತಿತರ ಕಡೆಗಳಿಂದ ಬೇಡಿಕೆ ಕಂಡು ಬರುತ್ತಿದೆ. ಎರಡು ಮತ್ತು ಮೂರನೇ ಹಂತದ ಪಟ್ಟಣಗಳಿಂದಲೂ ಮನವಿಗಳು ಬರುತ್ತಿವೆ.

‘ಡಿಜಿಟಲ್‌ ವಹಿವಾಟು ಸದ್ಯಕ್ಕೆ ಹಣ ಪಾವತಿಗಷ್ಟೇ ಸೀಮಿತಗೊಂಡಿದೆ. ಪ್ರತಿಯೊಬ್ಬ ರಿಟೇಲ್‌ ವ್ಯಾಪಾರಿ, ಕಿರಾಣಿ ಅಂಗಡಿ ಮಾಲೀಕರ ವಹಿವಾಟು ಹೆಚ್ಚಿಸುವ ತಂತ್ರಜ್ಞಾನ ಇದಾಗಿದೆ. ಎಂಎಸ್‌ಎಂಇಗಳು ಮತ್ತೆ ಆರ್ಥಿಕ ಅಭಿವೃದ್ಧಿಯ ಚಾಲಕನ ಸ್ಥಾನದಲ್ಲಿ ಕುಳಿತುಕೊಂಡು ದೇಶಿ ಆರ್ಥಿಕತೆಯನ್ನು ಮುಂದಕ್ಕೆ ಎಳೆದುಕೊಂಡು ಹೋಗಲು ನೆರವಾಗಲಿ ಎನ್ನುವುದು ನಮ್ಮ ಆಶಯವಾಗಿದೆ’ ಎಂದು ರಾಮಾ ಹೇಳುತ್ತಾರೆ. ಮಾಹಿತಿಗೆ https://www.ongoframework.com ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.

ವರ್ತಕರಿಗೆ ಪ್ರಯೋಜನ

* ಒಂದೇ ಅಪ್ಲಿಕೇಷನ್‌ನಡಿ ವಹಿವಾಟು ನಿರ್ವಹಣೆ

* ಆನ್‌ಲೈನ್‌ ಮತ್ತು ಆಫ್‌ಲೈನ್‌ ವಹಿವಾಟಿಗೆ ಚುರುಕು

* ಗ್ರಾಹಕರ ಖರೀದಿ ಪ್ರವೃತ್ತಿಯ ಮಾಹಿತಿ

* ಸುರಕ್ಷಿತ ವಹಿವಾಟು

* ರಿಟೇಲ್‌ ಬ್ರ್ಯಾಂಡ್‌ನ ಹಣಕಾಸು ವಹಿವಾಟಿನ ಸಮಗ್ರ ವಿವರ

* ಡಿಜಿಟಲ್‌ ಪಾವತಿ ವ್ಯವಸ್ಥೆ

ಗ್ರಾಹಕರಿಗೆ ಪ್ರಯೋಜನ

* ವೈಯಕ್ತಿಕ ಲಾಗಿನ್‌ನಡಿ ಸುಲಭ ಖರೀದಿ

* ಉತ್ತೇಜನಾ ಕೊಡುಗೆ ಮಾಹಿತಿ ಲಭ್ಯತೆ

* ಖರೀದಿ ಸುಲಭಗೊಳಿಸುವ ಮೊಬೈಲ್‌ ಆ್ಯಪ್‌

* ನೆರೆಹೊರೆಯಲ್ಲಿನ ರಿಟೇಲ್‌ ಮಳಿಗೆಗಳ ವಿವರ

* ಮನೆಯಿಂದಲೇ ಸರಕುಗಳಿಗೆ ಬೇಡಿಕೆ. ಮನೆ ಬಾಗಿಲಿಗೆ ತ್ವರಿತ ಪೂರೈಕೆ

ಸಿಇಒ ರಾಮಾ ಕುಪ್ಪಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.