ದಾವಣಗೆರೆ: ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿರ್ಬಂಧಿಸಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ದರ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.
ರಾಜ್ಯದಲ್ಲಿ ಆವರಿಸಿರುವ ಬರಗಾಲದ ನಡುವೆಯೂ ಬೆಳೆದಿರುವ ಈರುಳ್ಳಿಗೆ ಗಾತ್ರಕ್ಕೆ ತಕ್ಕಂತೆ ಪ್ರತಿ ಕ್ವಿಂಟಲ್‌ಗೆ ₹700ರಿಂದ ₹1,200 ದರ ಸಿಗುತ್ತಿದೆ. ಇದರಿಂದ ಬೆಳೆಗಾರರಿಗೆ ತೀವ್ರ ನಷ್ಟ ಉಂಟಾಗುತ್ತಿದೆ.
ಉತ್ಕೃಷ್ಟ ದರ್ಜೆಯ ಈರುಳ್ಳಿಗೆ ಪ್ರತಿ ಕ್ವಿಂಟಲ್‌ಗೆ ₹1,500, ಉತ್ತಮ ದರ್ಜೆ ಈರುಳ್ಳಿಗೆ ₹1,000–₹1,200, ಮಧ್ಯಮ ಗಾತ್ರದ ಈರುಳ್ಳಿಗೆ ₹700ರಿಂದ ₹800 ಹಾಗೂ ಸಣ್ಣ ಗಾತ್ರದ ಈರುಳ್ಳಿಗೆ ₹300ರಿಂದ ₹400 ದರ ಸಿಗುತ್ತಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹20ರಿಂದ ₹25ಕ್ಕೆ ಮಾರಾಟವಾಗುತ್ತಿದೆ. ಉತ್ತಮ ದರ ಸಿಗಬಹುದು ಎಂಬ ಆಶಾಭಾವದೊಂದಿಗೆ ಮಾರುಕಟ್ಟೆಗೆ ಬುಧವಾರ ಈರುಳ್ಳಿ ತಂದಿದ್ದ ರೈತರು ಕಂಗಾಲಾದರು.
ಇಲ್ಲಿನ ಎಪಿಎಂಸಿಯಲ್ಲಿ 3,000 ಕ್ವಿಂಟಲ್ ಈರುಳ್ಳಿ ಆವಕವಾಗಿದೆ.
ಎರಡೂವರೆ ಎಕರೆಯಲ್ಲಿ 12 ಕ್ವಿಂಟಲ್ ಈರುಳ್ಳಿ ಬೆಳೆದಿದ್ದು, ಎಲ್ಲ ಸೇರಿ ಕೇವಲ ₹6,500 ಸಿಕ್ಕಿದೆ. ಸಾಗಣೆ ದರ ಒಂದು ಚೀಲಕ್ಕೆ ₹100, ಹಮಾಲಿಗಳ ಕೂಲಿ ಸೇರಿಸಿದರೆ ರೈತರಿಗೆ ಏನೂ ಲಾಭವಿಲ್ಲ’ ಎಂದು ಕೊಪ್ಪಳ ಜಿಲ್ಲೆಯ ಚಿಕ್ಕೇನಕೊಪ್ಪದ ರೈತ ಶಂಕರಪ್ಪ ಹೇಳಿದರು.
‘ಗ್ರಾಹಕರಿಗೆ ತೊಂದರೆಯಾಗದಿರಲಿ ಎಂದು ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದೆ. ಆದರೆ, ರಫ್ತು ಮಾಡಿದರೆ ಮಾತ್ರ ನಮಗೆ ಉತ್ತಮ ಬೆಲೆ ಸಿಗುತ್ತದೆ. ಸರ್ಕಾರದ ನಿರ್ಧಾರವು ಬರಗಾಲಕ್ಕೆ ಸಿಲುಕಿ ನೊಂದಿರುವ ರೈತನ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಹೇಳಿದರು.
‘ನೆರೆಯ ಬಾಂಗ್ಲಾದೇಶ, ಶ್ರೀಲಂಕಾ, ದುಬೈ, ಇಂಡೊನೇಷ್ಯಾ, ಮಲೇಷ್ಯಾ, ಸಿಂಗಪುರ ಸೇರಿದಂತೆ 30–40 ದೇಶಗಳಿಗೆ ಭಾರತದಿಂದ ಈರುಳ್ಳಿ ರಫ್ತಾಗುತ್ತದೆ. ರಫ್ತು ಮಾಡಲು ಅವಕಾಶ ಕೊಟ್ಟಿದ್ದರೆ ಉತ್ತಮ ದರ ಸಿಗುತ್ತಿತ್ತು’ ಎಂದು ಈರುಳ್ಳಿ ಖರೀದಿದಾರ ಅತಾ ಉಲ್ಲಾ ತಿಳಿಸಿದರು.
ದಾವಣಗೆರೆ ಜಿಲ್ಲೆಯ ಜಗಳೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಾಯಕನಹಟ್ಟಿ ವಿಜಯನಗರ ಜಿಲ್ಲೆಯ ಕೊಟ್ಟೂರು ಕೂಡ್ಲಿಗಿ ಹರಪನಹಳ್ಳಿ ತಾಲ್ಲೂಕಿನಿಂದ ಇಲ್ಲಿನ ಮಾರುಕಟ್ಟೆಗೆ ಈರುಳ್ಳಿ ಬರುತ್ತಿದೆ. ಈ ಬಾರಿ ಇಳುವರಿ ಕುಂಠಿತವಾಗಿದೆ.–ಅರ್ಷದ್ ಅಲಿ, ಈರುಳ್ಳಿ ಖರೀದಿದಾರ, ದಾವಣಗೆರೆ ಎಪಿಎಂಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.