ADVERTISEMENT

ಕಟಾವು ಆರಂಭ: ಈರುಳ್ಳಿ ಬೆಲೆ ಇಳಿಕೆ ನಿರೀಕ್ಷೆ– ಕೇಂದ್ರ

ಪಿಟಿಐ
Published 13 ನವೆಂಬರ್ 2024, 16:28 IST
Last Updated 13 ನವೆಂಬರ್ 2024, 16:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಮುಂಗಾರು ಅವಧಿಯಲ್ಲಿ ಬಿತ್ತನೆಯಾಗಿದ್ದ ಈರುಳ್ಳಿಯ ಕಟಾವು ಆರಂಭವಾಗಿದೆ. ಈ ಹೊಸ ಸರಕು ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ ಚಿಲ್ಲರೆ ದರದಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ.

ಪ್ರಸ್ತುತ ದೇಶದಲ್ಲಿ ಈರುಳ್ಳಿಯ ಸರಾಸರಿ ಬೆಲೆಯು ಕೆ.ಜಿಗೆ ₹54 ಇದೆ. ಕಳೆದ ಒಂದು ತಿಂಗಳ ಹಿಂದೆ ಕೇಂದ್ರ ಸರ್ಕಾರವು ರಿಯಾಯಿತಿ ದರದಡಿ ಈರುಳ್ಳಿ ಮಾರಾಟಕ್ಕೆ ಚಾಲನೆ ನೀಡಿತ್ತು. ಹಾಗಾಗಿ, ಮಾರುಕಟ್ಟೆಯಲ್ಲಿ ಧಾರಣೆ ಇಳಿಕೆಯಾಗಿದೆ ಎಂದು ಹೇಳಿದೆ.

ದೆಹಲಿ ಮಾರುಕಟ್ಟೆಯಲ್ಲಿ ಕೆ.ಜಿಗೆ ₹35 ರಿಯಾಯಿತಿ ದರದಡಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದೆ. 

ADVERTISEMENT

ಸರ್ಕಾರವು ಒಟ್ಟು 4.5 ಲಕ್ಷ ಟನ್‌ ಈರುಳ್ಳಿ ಕಾಪು ದಾಸ್ತಾನು ಮಾಡಿದೆ. ಈ ಪೈಕಿ 1.5 ಲಕ್ಷ ಟನ್‌ನಷ್ಟು ಈರುಳ್ಳಿಯನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಿದೆ. 

ಚಿಲ್ಲರೆ ಮಾರುಕಟ್ಟೆಯಲ್ಲಿ ದರ ನಿಯಂತ್ರಿಸುವ ಉದ್ದೇಶದಿಂದ ಮೊದಲ ಬಾರಿಗೆ ರೈಲಿನ ಮೂಲಕ ಈರುಳ್ಳಿಯನ್ನು ದೆಹಲಿಗೆ ಸಾಗಣೆ ಮಾಡಲಾಗಿದೆ. ಬೆಲೆ ನಿಯಂತ್ರಣಕ್ಕೆ ಬರುವವರೆಗೂ ದಾಸ್ತಾನು ಇಟ್ಟಿರುವ ಈರುಳ್ಳಿಯನ್ನು ಇದೇ ಮಾದರಿಯಲ್ಲಿ ವಿವಿಧ ಮಾರುಕಟ್ಟೆಗಳಿಗೆ ಸಾಗಣೆ ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಕೆಲವು ವಾರದ ಹಿಂದೆ ದೆಹಲಿ, ಚೆನ್ನೈ ಮತ್ತು ಗುವಾಹಟಿಗೆ ರೈಲಿನ ಮೂಲಕ 4,850 ಟನ್‌ ಈರುಳ್ಳಿ ರವಾನೆಯಾಗಿದೆ. ಈ ಪೈಕಿ 3,170 ಟನ್‌ನಷ್ಟು ಈರುಳ್ಳಿ ದೆಹಲಿಗೆ ಪೂರೈಕೆಯಾಗಿದೆ. ಗುರುವಾರ 730 ಟನ್‌ನಷ್ಟು ಸರಕು ದೆಹಲಿ ತಲುಪಲಿದೆ ಎಂದು ವಿವರಿಸಿದೆ.

ಹಬ್ಬದ ಋತುವಿನಿಂದಾಗಿ ಮಂಡಿಗಳು ಕಾರ್ಯ ನಿರ್ವಹಿಸಲಿಲ್ಲ. ಇದರಿಂದ ಕಾರ್ಮಿಕರಿಗೆ ರಜೆ ಇತ್ತು. ಹಾಗಾಗಿ, ಕಳೆದ ಎರಡು ದಿನದಿಂದ ತುಸು ಏರಿಕೆ ಕಂಡಿದ್ದ ಈರುಳ್ಳಿ ಬೆಲೆಯು ಸದ್ಯ ನಿಯಂತ್ರಣದಲ್ಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.