ADVERTISEMENT

ಯಶವಂತಪುರ ಮಾರುಕಟ್ಟೆತಲ್ಲಿ ನಿತ್ಯ 5,000 ಚೀಲ ಈರುಳ್ಳಿ ಪೋಲು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 18:57 IST
Last Updated 29 ಅಕ್ಟೋಬರ್ 2024, 18:57 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಇಲ್ಲಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಗುಣಮಟ್ಟ ಕಳೆದುಕೊಂಡಿರುವ ಈರುಳ್ಳಿ ಆವಕ ಹೆಚ್ಚಾಗುತ್ತಿದೆ. ಸಗಟು ವ್ಯಾಪಾರಿಗಳು ರೈತರಿಂದ 50 ಕೆ.ಜಿ ತೂಕದ ಒಂದು ಚೀಲಕ್ಕೆ ₹50ರಿಂದ ₹100 ನೀಡಿ ಖರೀದಿಸುತ್ತಾರೆ.

ಆದರೆ, ಈ ಸರಕನ್ನು ಚಿಲ್ಲರೆ ವ್ಯಾಪಾರಿಗಳು ಖರೀದಿಸಲು ಮುಂದಾಗದಿರುವುದರಿಂದ ಈರುಳ್ಳಿ ಕೊಳೆತು ಹೋಗುತ್ತಿದೆ. ಇದರಿಂದ ಪ್ರತಿದಿನ 5 ಸಾವಿರ ಚೀಲದಷ್ಟು ಈರುಳ್ಳಿ ವ್ಯರ್ಥವಾಗುತ್ತಿದೆ. ಮಾರುಕಟ್ಟೆಯಲ್ಲಿ ಸಂಗ್ರಹವಾಗುವ ಈ ತ್ಯಾಜ್ಯವನ್ನು ಹೊರಸಾಗಿಸಲು ಬಿಬಿಎಂಪಿ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ ಎಂದು ಸಗಟುದಾರರು ಹೇಳುತ್ತಾರೆ.

ಸದ್ಯ ಕೊಪ್ಪಳ, ಚಳ್ಳಕೆರೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹೊಸದುರ್ಗ ಭಾಗದಲ್ಲಿ ಬೆಳೆದಿರುವ ಈರುಳ್ಳಿಯು ಪೂರೈಕೆಯಾಗುತ್ತಿದೆ. ಯಶವಂತಪುರದ ಎಪಿಎಂಸಿಗೆ ಮಂಗಳವಾರ 97,857 ಚೀಲ ಮತ್ತು ದಾಸನಪುರ ಎ‍ಪಿಎಂಸಿಗೆ 14,811 ಚೀಲ ಈರುಳ್ಳಿ ಆವಕವಾಗಿತ್ತು. 

ADVERTISEMENT

ಮಹಾರಾಷ್ಟ್ರದಿಂದ ಪೂರೈಕೆಯಾಗುವ ‘ಎ’ ಗ್ರೇಡ್‌ ಈರುಳ್ಳಿಗೆ ಪ್ರತಿ ಕ್ವಿಂಟಲ್‌ಗೆ ₹5,200ರಿಂದ ₹5,400 ದರವಿದೆ. ಸ್ಥಳೀಯವಾಗಿ ಪೂರೈಕೆಯಾಗುವ ‘ಎ’ ಗ್ರೇಡ್‌ ಈರುಳ್ಳಿಗೆ ಪ್ರತಿ ಕ್ವಿಂಟಲ್‌ಗೆ ₹4,200ರಿಂದ ₹4,500ರ ವರೆಗೆ ದರವಿದೆ. 

‘ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ₹50 ಸಾವಿರದಿಂದ ₹60 ಸಾವಿರ ಖರ್ಚಾಗುತ್ತದೆ. ಉತ್ತಮ ಇಳುವರಿ ಬಂದರೆ 120ರಿಂದ 150 ಕ್ವಿಂಟಲ್‌ ಸಿಗುತ್ತದೆ. ಉತ್ತಮ ದರ ಸಿಕ್ಕಿದರೆ ರೈತರಿಗೆ ಲಾಭ ದೊರೆಯಲಿದೆ. ಮಳೆಯಿಂದ ಬೆಳೆ ನಷ್ಟ ಅನುಭವಿಸಿ, ಅಳಿದುಳಿದ ಸರಕನ್ನು ಮಾರುಕಟ್ಟೆಗೆ ತರುವ ರೈತರಿಗೆ ಉತ್ತಮ ಬೆಲೆ ಕೂಡ ಸಿಗುತ್ತಿಲ್ಲ’ ಎಂದು ವರ್ತಕ ಲೋಕೇಶ್‌ ಜೀ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.