ಬೆಂಗಳೂರು: ಕಳೆದ ಒಂದು ವಾರದ ಅವಧಿಯಲ್ಲಿ ಇಲ್ಲಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ‘ಎ’ ಗ್ರೇಡ್ ಈರುಳ್ಳಿಯ ಸಗಟು ದರವು ಕ್ವಿಂಟಲ್‌ಗೆ ₹1,000 ಏರಿಕೆಯಾಗಿದೆ.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ರೈತರು ಬೆಳೆದಿದ್ದ ಈರುಳ್ಳಿ ಫಸಲು ಹಾನಿಗೀಡಾಗಿತ್ತು. ಸದ್ಯ ಮಾರುಕಟ್ಟೆಗೆ ಗುಣಮಟ್ಟ ಕಳೆದುಕೊಂಡಿರುವ ಈ ಈರುಳ್ಳಿಯ ಆವಕ ಹೆಚ್ಚಾಗುತ್ತಿದೆ.
ವಾರದ ಹಿಂದೆ ಸ್ಥಳೀಯವಾಗಿ ಪೂರೈಕೆಯಾಗುವ ‘ಎ’ ಗ್ರೇಡ್ ಈರುಳ್ಳಿಗೆ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ಸಗಟು ದರ ₹4,500 ಇತ್ತು. ಈಗ ₹5,500ಕ್ಕೆ ಮುಟ್ಟಿದೆ.
ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹45ರಿಂದ ₹65 ದರವಿದೆ. ಸಗಟು ದರ ಏರಿಕೆಯು ಇದೇ ರೀತಿ ಮುಂದುವರಿದರೆ ಚಿಲ್ಲರೆ ದರದಲ್ಲಿ ಸಹಜವಾಗಿ ಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಶುಕ್ರವಾರದಂದು ಯಶವಂತಪುರ ಎಪಿಎಂಸಿಗೆ 94,182 ಚೀಲ (ಪ್ರತಿ ಚೀಲ ₹50 ಕೆ.ಜಿ) ಹಾಗೂ ದಾಸನಪುರ ಎಪಿಎಂಸಿಗೆ 968 ಚೀಲ ಈರುಳ್ಳಿ ಆವಕವಾಗಿದೆ. ಪ್ರಸ್ತುತ ಗದಗ, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ ಭಾಗದಲ್ಲಿ ಬೆಳೆದಿರುವ ಈರುಳ್ಳಿಯು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ.
‘ಮಾರುಕಟ್ಟೆಗೆ ಪೂರೈಕೆಯಾಗುವ ಈರುಳ್ಳಿ ಪೈಕಿ ಶೇ 90ರಷ್ಟು ಸರಕು ಗುಣಮಟ್ಟ ಕಳೆದುಕೊಂಡಿದೆ. ಉಳಿದ ಶೇ 10ರಷ್ಟು ಸರಕಿಗಷ್ಟೇ ಉತ್ತಮ ಬೆಲೆ ಸಿಗುತ್ತಿದೆ. ಗುಣಮಟ್ಟ ಕಳೆದುಕೊಂಡಿರುವ ಈರುಳ್ಳಿಗೆ ಪ್ರತಿ ಕ್ವಿಂಟಲ್‌ಗೆ ₹500ರಿಂದ ₹1,500 ದರವಿದೆ. ಇದು ಬಹುಬೇಗ ಕೆಡುತ್ತದೆ. ಹಾಗಾಗಿ, ಇದನ್ನು ಬೇರೆ ರಾಜ್ಯಗಳು ಅಥವಾ ಜಿಲ್ಲೆಗಳಿಗೂ ಪೂರೈಸಲು ಆಗುತ್ತಿಲ್ಲ’ ಎನ್ನುತ್ತಾರೆ ಸಗಟು ವರ್ತಕ ಕೆ. ನಾಗರಾಜ್.
‘ಗುಣಮಟ್ಟ ಕಳೆದುಕೊಂಡಿರುವ ಈರುಳ್ಳಿಯನ್ನು ಮನೆಗಳಲ್ಲಿ ಹಲವು ದಿನದವರೆಗೆ ಸಂಗ್ರಹಿಸಿಟ್ಟುಕೊಳ್ಳಲು ಆಗುತ್ತಿಲ್ಲ. ಬಹುಬೇಗ ಕೊಳೆತು ಹೋಗುತ್ತಿದೆ. ಇದರಿಂದ ಹೆಚ್ಚು ತೆತ್ತು ಖರೀದಿಸಿದ ಗ್ರಾಹಕರು ಕೂಡ ತೊಂದರೆ ಅನುಭವಿಸುವಂತಾಗಿದೆ’ ಎಂಬುದು ಅವರ ವಿವರಣೆ.
ಮಹಾರಾಷ್ಟ್ರ ಸರಕಿಗೆ ಉತ್ತಮ ಬೆಲೆ
ಮಹಾರಾಷ್ಟ್ರದಿಂದ ಪೂರೈಕೆಯಾಗುವ ‘ಎ’ ಗ್ರೇಡ್ ಈರುಳ್ಳಿಯ ಪ್ರತಿ ಕೆ.ಜಿಗೆ ₹65ರಿಂದ ₹70 ದರವಿದೆ. ಅಲ್ಲಿಂದ ಹೊಸ ಸರಕು ಪೂರೈಕೆಯಾಗುವುದಿಲ್ಲ. ದಾಸ್ತಾನಿಟ್ಟುಕೊಂಡಿದ್ದ ಸರಕು ಪೂರೈಕೆಯಾಗುತ್ತಿದೆ ಎನ್ನುತ್ತಾರೆ ವರ್ತಕರು. ಮಹಾರಾಷ್ಟ್ರದ ವ್ಯಾಪಾರಿಗಳು ಪ್ರತಿನಿತ್ಯ 5 ಸಾವಿರ ಚೀಲದಷ್ಟು ಈರುಳ್ಳಿಯನ್ನು ಇಲ್ಲಿನ ಮಾರುಕಟ್ಟೆಗೆ ಪೂರೈಸುತ್ತಾರೆ. ‘ಬಿ’ ಗ್ರೇಡ್ ಈರುಳ್ಳಿಗೆ ಕೆ.ಜಿಗೆ ₹60ರಿಂದ ₹65 ಬೆಲೆಯಿದೆ ಎಂಬುದು ಅವರ ವಿವರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.