ನವದೆಹಲಿ: ಒಂದು ವಾರ ನಡೆದ ಹಬ್ಬದ ಅವಧಿಯ ಮಾರಾಟ ಮೇಳದಲ್ಲಿ ಗ್ರಾಹಕರಿಂದ ಬಂದಿರುವ ಬೇಡಿಕೆಗಳ ಪ್ರಮಾಣದಲ್ಲಿ ಶೇಕಡ 100ರಷ್ಟು ಹೆಚ್ಚಳ ಆಗಿದೆ ಎಂದು ಉಡುಪುಗಳ ಇ–ಮಾರಾಟ ಕಂಪನಿ ಮಿಂತ್ರಾ ಹೇಳಿದೆ.
ಹಬ್ಬದ ಮಾರಾಟ ಮೇಳದಲ್ಲಿ ಒಟ್ಟು 4.5 ಕೋಟಿ ಗ್ರಾಹಕರು ತನ್ನ ವೆಬ್ ಪೋರ್ಟಲ್‌ಗೆ ಭೇಟಿ ನೀಡಿದ್ದರು. ಈ ಪೈಕಿ 4 ಕೋಟಿ ಗ್ರಾಹಕರು ಒಟ್ಟು 1.3 ಕೋಟಿ ವಸ್ತುಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ ಎಂದು ಕಂಪನಿ ತಿಳಿಸಿದೆ. ‘ಬಿಗ್ ಫ್ಯಾಷನ್ ಫೆಸ್ಟಿವಲ್’ ಹೆಸರಿನ ಈ ಮಾರಾಟ ಮೇಳವು ಗುರುವಾರ ಕೊನೆಗೊಂಡಿದೆ.
ತನ್ನ ಪೋರ್ಟಲ್‌ಗೆ ಭೇಡಿ ನೀಡಿದ್ದ ಗ್ರಾಹಕರ ಪೈಕಿ ಶೇಕಡ 51ರಷ್ಟು ಮಂದಿ ಮಹಿಳೆಯರು ಎಂದೂ ಮಿಂತ್ರಾ ತಿಳಿಸಿದೆ. ‘ಹಿಂದಿನ ಅವಧಿಯ ಮಾರಾಟ ಮೇಳಕ್ಕೆ ಹೋಲಿಸಿದರೆ ಮೂರನೆಯ ಹಂತದ ನಗರಗಳಿಂದ ಬಂದ ಗ್ರಾಹಕರ ಸಂಖ್ಯೆಯಲ್ಲಿ ಶೇಕಡ 180ರಷ್ಟು ಹೆಚ್ಚಳ ಆಗಿದೆ’ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಮರ್ ನಗರಮ್ ಹೇಳಿದ್ದಾರೆ.
ಈ ಬಾರಿಯ ಮಾರಾಟ ಮೇಳದಲ್ಲಿ ಕಂಪನಿಯು ಒಟ್ಟು 10 ಲಕ್ಷ ಹೊಸ ಗ್ರಾಹಕರನ್ನು ಕಂಡುಕೊಂಡಿದೆ. ಹೊಸ ಗ್ರಾಹಕ
ರನ್ನು ಕಂಡುಕೊಳ್ಳುವ ಪ್ರಮಾಣವು ಕಳೆದ ಬಾರಿಯ ಮಾರಾಟ ಮೇಳಕ್ಕೆ ಹೋಲಿಸಿದರೆ ಶೇಕಡ 105ರಷ್ಟು ಹೆಚ್ಚು. ಈ ಬಾರಿಯ ಮಾರಾಟ ಮೇಳದಲ್ಲಿ ಪ್ರತಿ ನಿಮಿಷಕ್ಕೆ ಗರಿಷ್ಠ 9 ಸಾವಿರ ವಸ್ತುಗಳಿಗೆ ಗ್ರಾಹಕರು ಬೇಡಿಕೆ ಇರಿಸಿದ್ದರು ಎಂದು ಮಿಂತ್ರಾ ತಿಳಿಸಿದೆ. ನವೆಂಬರ್ 30ರಿಂದ ಎರಡನೆಯ ಸುತ್ತಿನ ಮಾರಾಟ ಮೇಳವನ್ನು ಆಯೋಜಿಸುವ ಆಲೋಚನೆ ಕಂಪನಿಗೆ ಇದೆ.
ಹಬ್ಬದ ಸಂದರ್ಭದಲ್ಲಿ ಮಾರಾಟವು ಜೋರಾಗಿ ನಡೆಯುತ್ತಿರುವುದನ್ನು ಫ್ಲಿಪ್‌ಕಾರ್ಟ್ ಕೂಡ ಎರಡು ದಿನಗಳ ಹಿಂದೆ ತಿಳಿಸಿತ್ತು. ‘ಮೊಬೈಲ್ ಫೋನ್‌ಗಳು, ಫ್ಯಾಷನ್ ವಸ್ತುಗಳು, ಪೀಠೋಪಕರಣಗಳಿಗೆ ಬರುವ ಬೇಡಿಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳದ ಸಂದರ್ಭದಲ್ಲಿ ಗ್ರಾಹಕರು ಪ್ರತಿ ಸೆಕೆಂಡಿಗೆ 110 ವಸ್ತುಗಳಿಗೆ ಬೇಡಿಕೆ ಇರಿಸುತ್ತಿದ್ದರು’ ಎಂದು ಫ್ಲಿಪ್‌ಕಾರ್ಟ್ ಹೇಳಿತ್ತು.
ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳವು ಅಕ್ಟೋಬರ್ 16ರಿಂದ 21ರವರೆಗೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.