ವಿಯೆನ್ನಾ (ಎಎಫ್‌ಪಿ): ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ (ಒಪೆಕ್) ಮತ್ತು ಆ ಒಕ್ಕೂಟದ ಮಿತ್ರರಾಷ್ಟ್ರಗಳ (ಒಪೆಕ್+) ಪ್ರತಿನಿಧಿಗಳು ನವೆಂಬರ್‌ನಿಂದ ದಿನಕ್ಕೆ 20 ಲಕ್ಷ ಬ್ಯಾರಲ್‌ಗಳಷ್ಟು ಕಚ್ಚಾ ತೈಲ ಉತ್ಪಾದನೆ ತಗ್ಗಿಸುವ ನಿರ್ಧಾರಕ್ಕೆ ಬಂದಿವೆ.
2020ರ ಬಳಿಕ ಅತ್ಯಂತ ಗರಿಷ್ಠ ಮಟ್ಟದ ಉತ್ಪಾದನೆ ಕಡಿತ ಇದಾಗಿದೆ. ಜಾಗತಿಕ ಆರ್ಥಿಕತೆಯ ಬಗ್ಗೆ ಮೂಡಿ ರುವ ಅನಿಶ್ಚಿತ ಪರಿಸ್ಥಿತಿ ಮತ್ತು ತೈಲ ಮಾರುಕಟ್ಟೆಯ ಮುನ್ನೋಟದ ಆಧಾರದ ಮೇಲೆ ಉತ್ಪಾದನೆ ಕಡಿತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ‘ಒಪೆಕ್+’ ಬುಧವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ನಿರ್ಧಾರದಿಂದ ಮಾರುಕಟ್ಟೆ ಯಲ್ಲಿ ಕಚ್ಚಾ ತೈಲ ದರವು ಭಾರಿ ಏರಿಕೆಗೆ ಕಾಣಲಿದೆ. ಹಲವು ದೇಶಗಳಲ್ಲಿ ಹಣದುಬ್ಬರವು ಈಗಾಗಲೇ ದಶಕಗಳ ಗರಿಷ್ಠ ಮಟ್ಟದಲ್ಲಿ ಇದ್ದು, ತೈಲ ಉತ್ಪಾ ದನೆ ಕಡಿತದಿಂದಾಗಿ ಅದು ಇನ್ನಷ್ಟು ಏರಿಕೆ ಆಗುವ ನಿರೀಕ್ಷೆ ಇದೆ.
ರಷ್ಯಾ ದೇಶವು ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಬಳಿಕ ಕಚ್ಚಾ ತೈಲ ದರ ಭಾರಿ ಏರಿಕೆ ಕಂಡಿತು. ಇದನ್ನು ನಿಯಂತ್ರಿಸಲು ಉತ್ಪಾದನೆ ಹೆಚ್ಚಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಜುಲೈನಲ್ಲಿ ಸೌದಿ ಅರೇಬಿಯಾಕ್ಕೆ ಒತ್ತಾಯಿಸಿದ್ದರು.
ರಷ್ಯಾವು ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ಬಳಿಕ ಫೆಬ್ರುವರಿಯಲ್ಲಿ ಒಂದು ಬ್ಯಾರಲ್‌ಗೆ 140 ಡಾಲರ್‌ಗೆ ತಲುಪಿದ್ದ ಕಚ್ಚಾ ತೈಲ ದರವು ಅಕ್ಟೋಬರ್ 2ರಂದು ಒಂದು ಬ್ಯಾರಲ್‌ಗೆ 88.83 ಡಾಲರ್‌ಗೆ ಇಳಿಕೆ ಆಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಮತ್ತು ತೈಲ ಬೇಡಿಕೆ ಇಳಿಕೆ ಕಾಣುವ ಆತಂಕದಿಂದಾಗಿ ಬ್ರೆಂಟ್ ಕಚ್ಚಾ ತೈಲ ದರವು ಕೆಲವು ತಿಂಗಳುಗಳಿಂದ ಇಳಿಮುಖವಾಗಿದೆ.
ಐರೋಪ್ಯ ಒಕ್ಕೂಟವು ರಷ್ಯಾದ ತೈಲ ಆಮದು ಮೇಲೆ ನಿಷೇಧ ಹೇರುವ ಆಲೋಚನೆಯಲ್ಲಿ ತೊಡಗಿವೆ. ಹೀಗಾಗಿ ತೈಲ ಉತ್ಪಾದನೆ ಕಡಿತದಿಂದ ರಷ್ಯಾಗೆ ಹೆಚ್ಚಿನ ಪ್ರಯೋಜನ ಆಗುವ ನಿರೀಕ್ಷೆ ಇದೆ.
ರಷ್ಯಾದ ತೈಲ ಆಮದಿನ ಮೇಲೆ ಐರೋಪ್ಯ ಒಕ್ಕೂಟದ ನಿಷೇಧವು ಡಿಸೆಂಬರ್‌ನಿಂದ ಜಾರಿಗೆ ಬರಲಿದೆ. ಆ ಬಳಿಕ ಮಾರುಕಟ್ಟೆಗೆ ಪೂರೈಕೆ ಆಗಲಿರುವ ತೈಲದ ಪ್ರಮಾಣವು ಇನ್ನಷ್ಟು ಇಳಿಕೆ ಆಗಲಿದೆ.
ಐರೋಪ್ಯ ಒಕ್ಕೂಟವು ರಷ್ಯಾದ ಮೇಲೆ ಕೆಲವು ಹೊಸ ಒಪ್ಪಂದಗಳಿಗೆ ಒಪ್ಪಿಗೆ ನೀಡಿದ್ದು ಅದರಲ್ಲಿರಷ್ಯಾ ತೈಲದ ಮೇಲೆ ದರ ಮಿತಿ ಹೇರುವುದು ಸೇರಿರುವ ಸಾಧ್ಯತೆ ಇದೆ.
ಬಾಕ್ಸ್
‘ಅಭಿವೃದ್ಧಿಶೀಲ ದೇಶಗಳಿಗೆ ಸಮಸ್ಯೆ’
ಒಪೆಕ್+ನ ನಿರ್ಧಾರದಿಂದ ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ಸಮಸ್ಯೆ ಆಗಲಿದೆ. ಇನ್ನಷ್ಟು ಹಣದುಬ್ಬರಕ್ಕೆ ಕಾರಣವಾಗಿ ಆರ್ಥಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ’ ಎಂದು ಎಫ್‌ಕೆಸಿಸಿಐನ ಮಾಜಿ ಅಧ್ಯಕ್ಷ ಡಿ. ಮುರಳೀಧರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪರಿಣಾಮದ ತೀವ್ರತೆಯನ್ನು ಈಗಲೇ ಅಂದಾಜು ಮಾಡುವುದು ಕಷ್ಟ. ಏಕೆಂದರೆ, ತೈಲ ಉತ್ಪಾದನೆ ಕಡಿತದಿಂದ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಕಡಿಮೆ ಆಗಲಿದೆ. ಅದರಿಂದ ಜಾಗತಿಕ ಮಟ್ಟದಲ್ಲಿ ಸಮಸ್ಯೆ ತಲೆದೂರಲಿದೆ’ ಎಂದು ಅವರು ಹೇಳಿದರು.
‘ಗ್ರಾಹಕರು ಈಗಷ್ಟೇ ಗರಿಷ್ಠ ದರಕ್ಕೆ ಇಂಧನ ಖರೀದಿಸುವುದರಿಂದ ಬಿಡುಗಡೆ ಪಡೆದಿದ್ದಾರೆ. ಹೀಗಿರುವಾಗ ಈ ಉತ್ಪಾದನೆ ಕಡಿತವು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಒನಡಾ ಕಂಪನಿಯ ವಿಶ್ಲೇಷಕ ಕ್ರೇಗ್ ಎಲಾರ್ಮ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.