ADVERTISEMENT

ತೈಲ ಉತ್ಪಾದನೆ ಹೆಚ್ಚಿಸಲು ಒಪ್ಪಿದ ಒಪೆಕ್

ಏಜೆನ್ಸೀಸ್
Published 2 ಏಪ್ರಿಲ್ 2021, 11:14 IST
Last Updated 2 ಏಪ್ರಿಲ್ 2021, 11:14 IST
ಪ್ರಾತಿನಿಧಿಕ ಚಿತ್ರ (ರಾಯಿಟರ್ಸ್‌)
ಪ್ರಾತಿನಿಧಿಕ ಚಿತ್ರ (ರಾಯಿಟರ್ಸ್‌)   

ಫ್ರ್ಯಾಂಕ್‌ಫರ್ಟ್‌: ಮೇ ತಿಂಗಳಿನಿಂದ ಜುಲೈ ನಡುವಿನ ಅವಧಿಯಲ್ಲಿ ಕಚ್ಚಾ ತೈಲ ಉತ್ಪಾದನೆಯನ್ನು ಪ್ರತಿ ದಿನಕ್ಕೆ ಅಂದಾಜು 20 ಲಕ್ಷ ಬ್ಯಾರೆಲ್‌ಗಳಷ್ಟು ಹೆಚ್ಚಿಸಲಾಗುವುದು ಎಂದು ಪೆಟ್ರೋಲಿಯಂ ರಫ್ತುದಾರ ದೇಶಗಳ ಒಕ್ಕೂಟ (ಒಪೆಕ್) ಮತ್ತು ಆ ಒಕ್ಕೂಟದ ಮಿತ್ರರಾಷ್ಟ್ರಗಳು ಹೇಳಿವೆ.

ಕೋವಿಡ್–19 ಸಾಂಕ್ರಾಮಿಕ ತೀವ್ರವಾಗಿದ್ದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಾಗ, ಒಪೆಕ್ ದೇಶಗಳು ಉತ್ಪಾದನೆಯನ್ನು ಕಡಿಮೆ ಮಾಡಿದ್ದವು. ಈಗ ಒಕ್ಕೂಟವು ತೈಲ ಉತ್ಪಾದನೆಯನ್ನು ಜಾಗರೂಕವಾಗಿ ಹೆಚ್ಚಿಸುವ ತೀರ್ಮಾನ ಕೈಗೊಂಡಿವೆ.

ಮೇ ತಿಂಗಳಲ್ಲಿ ಪ್ರತಿದಿನ 3.50 ಲಕ್ಷ ಬ್ಯಾರೆಲ್‌ನಷ್ಟು ತೈಲ ಉತ್ಪಾದನೆ ಹೆಚ್ಚಿಸಲಾಗುವುದು. ಜೂನ್‌ನಲ್ಲಿ ಕೂಡ ಪ್ರತಿದಿನ 3.50 ಲಕ್ಷ ಬ್ಯಾರೆಲ್‌ ಹಾಗೂ ಜುಲೈನಲ್ಲಿ ಪ್ರತಿದಿನ 4 ಲಕ್ಷ ಬ್ಯಾರೆಲ್‌ನಷ್ಟು ತೈಲ ಉತ್ಪಾದನೆ ಹೆಚ್ಚಿಸಲು ಒಪೆಕ್ ನಿರ್ಧರಿಸಿದೆ. ಇದಲ್ಲದೆ, ಸೌದಿ ಅರೇಬಿಯಾ ದೇಶವು ಹೆಚ್ಚುವರಿಯಾಗಿ ಪ್ರತಿದಿನ 10 ಲಕ್ಷ ಬ್ಯಾರೆಲ್‌ ತೈಲ ಉತ್ಪಾದನೆ ಮಾಡಲಿದೆ.

ADVERTISEMENT

ಸೌದಿ ಅರೇಬಿಯಾ ನೇತೃತ್ವದ ಒಪೆಕ್ ಮತ್ತು ರಷ್ಯಾ ನೇತೃತ್ವದ ಇತರ ತೈಲ ಉತ್ಪಾದಕ ರಾಷ್ಟ್ರಗಳು ಪ್ರತಿ ತಿಂಗಳೂ ಸಭೆ ಸೇರಿ, ಉತ್ಪಾದನೆಯು ಯಾವ ಪ್ರಮಾಣದಲ್ಲಿ ಇರಬೇಕು ಎಂಬುದನ್ನು ತೀರ್ಮಾನಿಸುತ್ತಿವೆ. ಈ ದೇಶಗಳು ಈಗ ಹಲವು ಒತ್ತಡಗಳನ್ನು ಎದುರಿಸುತ್ತಿವೆ. ತೈಲಕ್ಕೆ ಪೂರ್ತಿ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗುವ ಮೊದಲೇ ಉತ್ಪಾದನೆ ಜಾಸ್ತಿ ಮಾಡಿದರೆ ಮಾರುಕಟ್ಟೆಯಲ್ಲಿ ತೈಲದ ಬೆಲೆ ಕುಸಿಯುತ್ತದೆ. ಉತ್ಪಾದನೆಯನ್ನು ಕಡಿಮೆ ಮಟ್ಟದಲ್ಲಿಯೇ ಇರಿಸಿದರೆ, ಈ ದೇಶಗಳ ಬಜೆಟ್‌ಗೆ ಅಗತ್ಯವಿರುವ ಹಣದ ಹರಿವು ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.