ADVERTISEMENT

ತೈಲ ಉತ್ಪಾದನೆ ತಗ್ಗಿಸುವ ಚಿಂತನೆ

ಏಜೆನ್ಸೀಸ್
Published 6 ಡಿಸೆಂಬರ್ 2018, 17:04 IST
Last Updated 6 ಡಿಸೆಂಬರ್ 2018, 17:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಯೆನ್ನಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಒತ್ತಡದ ನಡುವೆಯೂ, ಒಪೆಕ್ ಸದಸ್ಯ ರಾಷ್ಟ್ರಗಳು ಮತ್ತು ಇತರೆ ದೇಶಗಳು ತೈಲ ಉತ್ಪಾದನೆ ತಗ್ಗಿಸುವ ಬಗ್ಗೆ ಚಿಂತನೆ ನಡೆಸಿವೆ.

ಮಾರುಕಟ್ಟೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಒಪೆಕ್‌ ಸದಸ್ಯ ರಾಷ್ಟ್ರಗಳು ಮತ್ತು ರಷ್ಯಾ, ದಿನಕ್ಕೆ 10 ಲಕ್ಷ ಬ್ಯಾರೆಲ್‌ಗಳಷ್ಟು ಉತ್ಪಾದನೆ ತಗ್ಗಿಸಲು ಒಪ್ಪುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ತೈಲ ಉತ್ಪಾದನೆ ತಗ್ಗಿಸುವ ಮೂಲಕ ದರವನ್ನು ನಿಯಂತ್ರಣಕ್ಕೆ ತರಲು ಒಪೆಕ್‌ ಮತ್ತು ಇತರೆ ತೈಲ ಉತ್ಪಾದನಾ ರಾಷ್ಟ್ರಗಳು ಎರಡು ದಿನಗಳವರೆಗೆ ಸಭೆ ನಡೆಸಿ, ನಿರ್ಧಾರ ಕೈಗೊಳ್ಳಲಿವೆ.

ADVERTISEMENT

‘ಮೊದಲ ದಿನದ ಸಭೆಯಲ್ಲಿ, ಮಾರುಕಟ್ಟೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಉತ್ಪಾದನೆ ತಗ್ಗಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’ ಎಂದು ಸೌದಿಯ ಇಂಧನ ಸಚಿವ ಖಾಲಿದ್‌ ಅಲ್‌ ಫಲಿಹ್‌ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಮೆರಿಕ ಮತ್ತು ಸೌದಿ ಅರೇಬಿಯಾ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಉತ್ಪಾದನೆ ಮಾಡುತ್ತಿವೆ. ಹೀಗಾಗಿ ಅಕ್ಟೋಬರ್‌ನಿಂದ ದರದಲ್ಲಿ ಇಳಿಕೆ ಕಂಡುಬರುತ್ತಿದೆ.

ಅಮೆರಿಕದ ಒಪ್ಪಿಗೆ ಬೇಕಿಲ್ಲ: ತೈಲ ಉತ್ಪಾದನೆ ತಗ್ಗಿಸುವ ವಿಷಯದಲ್ಲಿ ಅಮೆರಿಕದ ಒಪ್ಪಿಗೆಯ ಅಗತ್ಯ ಇಲ್ಲ. ಏನು ಮಾಡಬೇಕು ಎಂದು ಹೇಳುವ ಸ್ಥಿತಿಯಲ್ಲಿ ಅಮೆರಿಕ ಇಲ್ಲ ಎಂದು ಖಾಲಿದ್‌ ಹೇಳಿದ್ದಾರೆ.

ಒಪೆಕ್‌,ಮಾರುಕಟ್ಟೆಗೆ ತೈಲ ಪೂರೈಕೆಯನ್ನು ಈಗಿರುವಂತೆಯೇ ಮುಂದುವರಿಸಿಕೊಂಡು ಹೋಗಲಿದೆ ಎನ್ನುವ ವಿಶ್ವಾಸವಿದೆ. ತೈಲ ದರ ಗರಿಷ್ಠ ಮಟ್ಟದಲ್ಲಿರುವುದು ಯಾರಿಗೂ ಇಷ್ಟವಿಲ್ಲ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದರು. ಇದಕ್ಕೆ ಖಾಲಿದ್‌ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

‘ಈ ವಿಷಯದಲ್ಲಿ ಅಮೆರಿಕ ಸುಮ್ಮನಿರುವುದೇ ಒಳಿತು. ಉತ್ಪಾದನೆ ತಗ್ಗಿಸಲು ನಮಗೆ ಯಾರೊಬ್ಬರಿಂದಲೂ ಅನುಮತಿ ಬೇಕಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.