ಮುಂಬೈ: ಸಾಲ ನೀಡುವ ಸಂಸ್ಥೆಗಳು ಸಾಲ ವಸೂಲಿ ಕೆಲಸವನ್ನು ಮೂರನೆಯ ವ್ಯಕ್ತಿಗಳಿಗೆ ವಹಿಸುವುದಕ್ಕೆ ತನ್ನ ವಿರೋಧ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಸ್ಪಷ್ಟಪಡಿಸಿದೆ. ಆದರೆ, ಸಾಲ ವಸೂಲಿಯು ಕಾನೂನಿಗೆ ಅನುಗುಣವಾಗಿ ಆಗಬೇಕು ಎಂಬುದು ತನ್ನ ನಿರೀಕ್ಷೆ ಎಂದು ಹೇಳಿದೆ.
ಸಾಲ ವಸೂಲಿ ಏಜೆಂಟ್ ಒಬ್ಬ ಜಾರ್ಖಂಡ್‌ನಲ್ಲಿ ಈಚೆಗೆ ಗರ್ಭಿಣಿ ಮಹಿಳೆಯೊಬ್ಬರ ಮೇಲೆ ಟ್ರ್ಯಾಕ್ಟರ್ ಹರಿಸಿ, ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎನ್ನಲಾಗಿದ್ದು, ಆ ಘಟನೆಯ ನಂತರದಲ್ಲಿ ಆರ್‌ಬಿಐ, ಮಹೀಂದ್ರ ಆ್ಯಂಡ್ ಮಹೀಂದ್ರ ಫೈನಾನ್ಶಿಯಲ್ ಸರ್ವಿಸಸ್ ಕಂಪನಿಗೆ ಸಾಲ ವಸೂಲಿಗೆ ಹೊರಗಿನ ಏಜೆಂಟರ ನೆರವು ಪಡೆಯುವಂತಿಲ್ಲ ಎಂದು ಸೂಚಿಸಿದೆ.
ಮಹೀಂದ್ರ ಫೈನಾನ್ಸ್‌ಗೆ ನೀಡಿರುವ ಸೂಚನೆಯನ್ನು ಉಲ್ಲೇಖಿಸಿ ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ.ಕೆ. ಜೈನ್ ಅವರು, ‘ನಿಯಂತ್ರಣಕ್ಕೆ ಒಳಪಟ್ಟಿರುವ ಸಂಸ್ಥೆಗಳ ಹಕ್ಕನ್ನು ಹಿಂಪಡೆಯುವ ಉದ್ದೇಶ ಇದರ ಹಿಂದಿಲ್ಲ. ಆದರೆ ಕಾನೂನಿಗೆ ಅನುಗುಣವಾಗಿ ಕೆಲಸ ಆಗಬೇಕು ಎಂಬುದು ನಮ್ಮ ಬಯಕೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.