ADVERTISEMENT

ಕೇಂದ್ರದ ನೀತಿಗಳಿಂದ ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ: ವರದಿ

ಪಿಟಿಐ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ‘ನೋಟು ರದ್ದತಿ, ರೇರಾ, ಜಿಎಸ್‌ಟಿ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ, ಕೈಗೆಟಕುವ ದರದ ಮನೆಗಳ ವಿಶೇಷ ಯೋಜನೆಯಂಥ (ಎಸ್‌ಡಬ್ಲ್ಯುಎಎಂಐಎಚ್‌) ಕೇಂದ್ರ ಸರ್ಕಾರದ ಸುಧಾರಣಾ ನೀತಿಗಳ ಕಾರಣದಿಂದ ಕಳೆದ 10 ವರ್ಷಗಳಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರ ಹಲವು ಪಟ್ಟು ಹಿಗ್ಗಿದೆ. ಈ ಕಾರಣಕ್ಕಾಗಿ ಈ ಕ್ಷೇತ್ರದಲ್ಲಿ ಇದೇ ಅವಧಿಯಲ್ಲಿ 3 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ’ ಎಂದು ಅನರಾಕ್‌ ಹಾಗೂ ಎನ್‌ಎಆರ್‌ಇಡಿಸಿಒ ಜಂಟಿಯಾಗಿ ಸೋಮವಾರ ವರದಿ ಬಿಡುಗಡೆ ಮಾಡಿವೆ.

‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಹಲವು ಸುಧಾರಣಾ ಕ್ರಮಗಳ ಕಾರಣದಿಂದಾಗಿಯೇ ಈ ಕ್ಷೇತ್ರವು ಶಕ್ತಿಯುತವಾಗಿರುವುದಲ್ಲದೆ, ಹೊಸ ಎತ್ತರಗಳನ್ನೂ ಏರಿದೆ. ಇದೇ ಕಾರಣಕ್ಕೆ, 2013ರಲ್ಲಿ 4 ಕೋಟಿಯಷ್ಟಿದ್ದ ಉದ್ಯೋಗಾವಕಾಶವು 2023ರಲ್ಲಿ 7.1 ಕೋಟಿಗೆ ಏರಿಕೆಯಾಗಿದೆ. ಜೊತೆಗೆ, ದೇಶದ ಒಟ್ಟು ಉದ್ಯೋಗಗಳಲ್ಲಿ ಶೇ 18ರಷ್ಟು ಉದ್ಯೋಗವು ರಿಯಲ್‌ ಎಸ್ಟೇಟ್‌ ಕ್ಷೇತ್ರದಿಂದಲೇ ಸೃಷ್ಟಿಯಾಗಿವೆ’ ಎಂದು ‘ರಿಯಲ್‌ ಎಸ್ಟೇಸ್‌ ಅನ್‌ಬಾಕ್ಸ್ಡ್‌: ದಿ ಮೋದಿ ಎಫೆಕ್ಟ್‌’ ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಅಧಿಕಗೊಂಡ ಬೇಡಿಕೆ

‘ಕಳೆದ 10 ವರ್ಷದ ಪ್ರಯಾಣವು ಯಶಸ್ವಿಯಾಗಿತ್ತು. ಬೇಡಿಕೆಯು ಅತ್ಯಧಿಕವಾಗಿತ್ತು. ಸರ್ಕಾರವು ತನ್ನ ನೀತಿಗಳ ಮೂಲಕ ಸಹಕಾರ ನೀಡಿತು. ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಅಂಶಗಳು ಕ್ಷೇತ್ರದ ಭವಿಷ್ಯದ ವೃದ್ಧಿಗೆ ಪೂರಕವಾಗಿರಲಿವೆ. ದೇಶದ ಏಳು ಪ್ರಮುಖ ನಗರಗಳಲ್ಲಿ ಮನೆ ಬೆಲೆಗಳು ಶೇ 25ರಿಂದ ಶೇ60ರಷ್ಟು ಏರಿಕೆ ಕಂಡಿದೆ. ಈ ನಗರಗಳಲ್ಲಿ 29.32 ಲಕ್ಷ ಮನೆಗಳ ನಿರ್ಮಾಣವಾಗಿವೆ. ಇವುಗಳಲ್ಲಿ 28.27 ಲಕ್ಷ ಮನೆಗಳು ಮಾರಾಟವಾಗಿವೆ’ ಎಂದು ಅನರಾಕ್‌ನ ಅಧ್ಯಕ್ಷ ಅನುಜ್‌ ಪುರಿ ಹೇಳಿದ್ದಾರೆ.

ಅಧಿಕ ಬೇಡಿಕೆ ಇರುವ ನಗರಗಳು

* ದೆಹಲಿ–ಎನ್‌ಸಿಆರ್‌

* ಮುಂಬೈ

* ಕೋಲ್ಕತ್ತ

* ಚೆನ್ನೈ

* ಬೆಂಗಳೂರು

* ಹೈದರಾಬಾದ್‌

* ಪುಣೆ

ರಿಯಲ್‌ ಎಸ್ಟೇಟ್‌ ಕ್ಷೇತ್ರವು 2014–17ರವರೆಗೆ ದೇಶದ ಜಿಡಿಪಿಗೆ ಶೇ 6.8ರಷ್ಟು ಕೊಡುಗೆ ನೀಡುತ್ತಿತ್ತು. 2025ರ ಹೊತ್ತಿಗೆ ಈ ಸಂಖ್ಯೆಯು ಶೇ 13ರಷ್ಟಾಗಲಿದೆ. ಉದ್ಯೋಗ ಸೃಷ್ಟಿಯೊಂದೇ ಅಲ್ಲದೆ ರಿಯಲ್‌ ಎಸ್ಟೇಟ್‌ಗೆ ಪೂರಕ ಉದ್ಯಮಗಳ ಕ್ಷೇತ್ರವೂ ಪ್ರಗತಿ ಸಾಧಿಸಿದೆ.
–‘ರಿಯಲ್‌ ಎಸ್ಟೇಸ್‌ ಅನ್‌ಬಾಕ್ಸ್ಡ್‌: ದಿ ಮೋದಿ ಎಫೆಕ್ಟ್‌’ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.