ನವದೆಹಲಿ: ಬಂಡವಾಳ ಸಂಗ್ರಹಿಸಲು ವಿದೇಶಿ ಬಾಂಡ್ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲು ಪ್ರಧಾನಿ ಕಚೇರಿಯು (ಪಿಎಂಒ) ಹಣಕಾಸು ಸಚಿವಾಲಯಕ್ಕೆ ಕೇಳಿಕೊಂಡಿದೆ.
ವಿದೇಶಿ ಬಾಂಡ್‌ಗಳಿಂದ ಹಣ ಸಂಗ್ರಹಿಸುವ ಕೇಂದ್ರ ಸರ್ಕಾರದ ಚಿಂತನೆಗೆ ವಿವಿಧ ವಲಯಗಳಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗಿರುವ ಕಾರಣಕ್ಕೆ ‘ಪಿಎಂಒ’ ಈ ಕ್ರಮ ಕೈಗೊಂಡಿದೆ.
ವಿದೇಶಿ ಬಾಂಡ್‌ಗಳನ್ನು ನೀಡುವುದರಿಂದ ಆಗುವ ಪರಿಣಾಮಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಮತ್ತು ಡೆಪ್ಯುಟಿ ಗವರ್ನರ್‌ಗಳು ವ್ಯಕ್ತಪಡಿಸಿರುವ ಆತಂಕಗಳನ್ನು ಪರಿಶೀಲಿಸಲು ಕೇಳಿಕೊಳ್ಳಲಾಗಿದೆ. ವಿವರವಾದ ವರದಿ ಕೈ ಸೇರಿದ ನಂತರವೇ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ತೀರ್ಮಾನಿಸಲಾಗಿದೆ.
ಸರ್ಕಾರದ ಒಟ್ಟಾರೆ ಸಾಲ ಸಂಗ್ರಹಿಸುವ ನೀತಿಯಲ್ಲಿ ವಿದೇಶಿ ಮಾರುಕಟ್ಟೆಗಳಿಂದ ವಿದೇಶಿ ಕರೆನ್ಸಿಗಳಲ್ಲಿ ಬಂಡವಾಳ ಸಂಗ್ರಹಿಸುವುದನ್ನು ಪರಿಗಣಿಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರಕಟಿಸಿದ್ದರು.
ಸಾಗರೋತ್ತರ ಬಾಂಡ್‌ಗಳಿಂದ ಬಂಡವಾಳ ಸಂಗ್ರಹಿಸುವ ಆಲೋಚನೆಯನ್ನು ಅನೇಕರು ಟೀಕಿಸಿದ್ದಾರೆ. ಆರ್ಥಿಕ ತಜ್ಞರಷ್ಟೇ ಅಲ್ಲದೆ, ಆಡಳಿತಾರೂಢ ಬಿಜೆಪಿಯ ಮಿತ್ರ ಪಕ್ಷಗಳೂ ತಮ್ಮ ಆಕ್ಷೇಪ ದಾಖಲಿಸಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಆರ್ಥಿಕ ಶಾಖೆಯಾಗಿರುವ ಸ್ವದೇಶಿ ಜಾಗರಣ್ ಮಂಚ್ (ಎಸ್‌ಜೆಎಂ) ಕೂಡ ವಿದೇಶಿ ಬಾಂಡ್ ನೀಡಿಕೆ ಆಲೋಚನೆಯನ್ನು ಟೀಕಿಸಿದೆ.
‘ಆರ್ಥಿಕ ಸಾರ್ವಭೌಮತ್ವ ಮತ್ತು ಹಣಕಾಸು ಪರಿಣಾಮಗಳಿಗಾಗಿ ನಾನು ಈ ಪ್ರಸ್ತಾವದ ಬಗ್ಗೆ ಕಳವಳ ಹೊಂದಿರುವೆ. ವಿದೇಶಿ ಬಾಂಡ್ ನೀಡಿಕೆ ಬದಲಾಗಿ ಸರ್ಕಾರಿ ಬಾಂಡ್‌ಗಳಲ್ಲಿ ವಿದೇಶಿ ಹೂಡಿಕೆದಾರರ ಹೂಡಿಕೆ ಮಿತಿಯನ್ನು ಹೆಚ್ಚಿಸಬೇಕಿತ್ತು’ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಸದಸ್ಯ ರಥಿನ್ ರಾಯ್ ಹೇಳಿದ್ದಾರೆ.
ಖಾಸಗಿ ವಲಯಕ್ಕೆ ಹೆಚ್ಚು ನಿಧಿ ಮೀಸಲಿಟ್ಟು, ಸರ್ಕಾರವು ತನ್ನ ಸಂಪನ್ಮೂಲ ಕ್ರೋಡಿಕರಣದ ಮೂಲಗಳನ್ನು ವಿಸ್ತರಿಸಲು ವಿದೇಶಿ ಕರೆನ್ಸಿ ರೂಪದಲ್ಲಿ ₹ 70 ಸಾವಿರ ಕೋಟಿ ಮೊತ್ತದ ವಿದೇಶಿ ಸಾಲ ಸಂಗ್ರಹಿಸಲು ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.