ನವದೆಹಲಿ: ಆನ್‌ಲೈನ್ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಎದುರಿಸಿದ ತಾಂತ್ರಿಕ ತೊಡಕಿನಿಂದಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ಜೊತೆಗಿನ ಒಪ್ಪಂದವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ರದ್ದುಪಡಿಸಿದೆ.
ವಿಶ್ವದಾದ್ಯಂತ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಪ್ರವೇಶಾತಿ ಕೋರಿ ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆಯುತ್ತಾರೆ. ಬ್ರಿಟನ್‌ನ 30 ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ವಿಶ್ವವಿದ್ಯಾಲಯವು ಈ ಪರೀಕ್ಷೆ ನಡೆಸುತ್ತದೆ.
ಭಾರತದ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಕೂಡ ಇದೇ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ.
2023ರ ಏಪ್ರಿಲ್ 1ರಂದು ವಿಶ್ವವಿದ್ಯಾಲಯವು, ಟಿಸಿಎಸ್‌ನ ಕಲಿಕಾ ಮತ್ತು ಮೌಲ್ಯಮಾಪನ ಘಟಕವಾದ ‘ಟಿಸಿಎಸ್ ಐಒಎನ್’ ಅನ್ನು ಪರೀಕ್ಷಾ ಏಜೆನ್ಸಿಯಾಗಿ ಆಯ್ಕೆ ಮಾಡಿತ್ತು. ಇದಕ್ಕೂ ಮೊದಲು ಕೇಂಬ್ರಿಡ್ಜ್ ಅಡ್ಮಿಷನ್ ಅಸೆಸ್‌ಮೆಂಟ್ ಟೆಸ್ಟಿಂಗ್ ಏಜೆನ್ಸಿಯಾಗಿತ್ತು.
ಆದರೆ, ಆನ್‌ಲೈನ್‌ನಲ್ಲಿ ಪ್ರವೇಶ ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳು ತಾಂತ್ರಿಕ ತೊಡಕು ಎದುರಿಸಿದ್ದರು. ಹಾಗಾಗಿ, ಮುಂದಿನ ಪರೀಕ್ಷೆಗಳಿಗೆ ಟಿಸಿಎಸ್‌ನಿಂದ ಯಾವುದೇ ಸೇವೆ ಪಡೆಯುವುದಿಲ್ಲ ಎಂದು ವಿಶ್ವವಿದ್ಯಾಲಯದ ವಕ್ತಾರರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪರೀಕ್ಷಾ ಕೇಂದ್ರಗಳಿಂದಲೂ ತಾಂತ್ರಿಕ ದೋಷ ಎದುರಾದ ಬಗ್ಗೆ ಮಾಹಿತಿ ಪಡೆದಿದ್ದೇವೆ. ಗುಣಮಟ್ಟದ ಸೇವೆ ನೀಡುವುದು ನಮ್ಮ ಆದ್ಯತೆಯಾಗಿದೆ. ಸಮಸ್ಯೆ ಎದುರಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ತಾಳ್ಮೆಗೆ ಆಭಾರಿಯಾಗಿದ್ದೇವೆ. ಫೆಬ್ರುವರಿಯಲ್ಲಿ ಮುಂದಿನ ಪ್ರವೇಶ ಸುತ್ತಿನ ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮೊದಲೇ ಹೊಸ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.