ನವದೆಹಲಿ: ಪ್ಯಾಕ್ ಮಾಡಿರುವ, ಫ್ರೋಜನ್ ‘ಪರೋಟ’ವು ‘ರೋಟಿ’ಗೆ ಸಮ ಅಲ್ಲ; ಇಂತಹ ಪರೋಟಕ್ಕೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಶೇಕಡ 5ರಷ್ಟು ಮಾತ್ರ ತೆರಿಗೆ ವಿಧಿಸಲಾಗದು ಎಂದು ಗುಜರಾತ್ ಮೇಲ್ಮನವಿ ಪ್ರಾಧಿಕಾರ (ಜಿಎಎಎಆರ್) ಹೇಳಿದೆ.
ಮಲಬಾರ್, ಮೇಥಿ, ಆಲೂ, ಲಚ್ಚಾ, ಮೂಲಿ ಅಥವಾ ಇನ್ಯಾವುದೇ ಹೆಸರಿನ ಇಂತಹ ಪರೋಟಗಳಲ್ಲಿ ಹೆಚ್ಚುವರಿ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಉಪ್ಪು, ಎಣ್ಣೆ, ಆಲೂಗಡ್ಡೆ, ಹೂಕೋಸು ಇವುಗಳಲ್ಲಿ ಇರುತ್ತದೆ. ರೋಟಿ ಅಥವಾ ಚಪಾತಿಗಳಲ್ಲಿ ಇರುವುದು ಗೋಧಿ ಹಿಟ್ಟು ಮಾತ್ರ. ಈ ಕಾರಣಗಳಿಗಾಗಿ ಪರೋಟಗಳಿಗೆ ಶೇ 5ರಷ್ಟು ಮಾತ್ರ ತೆರಿಗೆ ವಿಧಿಸಲಾಗದು ಎಂದು ಅದು ಹೇಳಿದೆ.
ಅಹಮದಾಬಾದ್ ಮೂಲದ ವಾದಿಲಾಲ್ ಇಂಡಸ್ಟ್ರೀಸ್ ಕಂಪನಿಯು, ಜಿಎಎಆರ್ ಆದೇಶ ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರದ (ಜಿಎಎಎಆರ್) ಮೆಟ್ಟಿಲೇರಿತ್ತು. 2021ರ ಜೂನ್‌ನಲ್ಲಿ ಜಿಎಎಆರ್, ಕಂಪನಿ ಮಾರಾಟ ಮಾಡುತ್ತಿರುವ ಪರೋಟವು ರೋಟಿ ಅಥವಾ ಚಪಾತಿಯಂತೆ ಅಲ್ಲ. ಹೀಗಾಗಿ, ಪರೋಟದ ಮೇಲೆ ಶೇ 18ರಷ್ಟು ತೆರಿಗೆ ವಿಧಿಸಬೇಕು ಎಂದು ಹೇಳಿತ್ತು.
ಎಎಆರ್‌ನ ಕರ್ನಾಟಕದ ಪೀಠವು ಕೂಡ ಐಡಿ ಫ್ರೆಶ್ ಫುಡ್ಸ್ ಪ್ರಕರಣದಲ್ಲಿ, ಫ್ರೋಜನ್ ಪರೋಟಗಳಿಗೆ ಶೇ 18ರಷ್ಟು ತೆರಿಗೆ ವಿಧಿಸಬೇಕು ಎಂದು ಆದೇಶ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.