ADVERTISEMENT

ಭತ್ತ ಖರೀದಿ ಸುಗಮ

ಪಂಜಾಬ್‌, ಹರಿಯಾಣದಲ್ಲಿ 245 ಲಕ್ಷ ಟನ್‌ ಸಂಗ್ರಹ ಗುರಿ

ಪಿಟಿಐ
Published 31 ಅಕ್ಟೋಬರ್ 2024, 14:36 IST
Last Updated 31 ಅಕ್ಟೋಬರ್ 2024, 14:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಭತ್ತ ಖರೀದಿ ಪ್ರಕ್ರಿಯೆಯು ಸುಗಮವಾಗಿ ನಡೆಯುತ್ತಿದ್ದು, ಬುಧವಾರದವರೆಗೆ 112 ಲಕ್ಷ ಟನ್‌ ಖರೀದಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ ತಿಳಿಸಿದೆ.

ಅತಿಹೆಚ್ಚು ಭತ್ತ ಬೆಳೆಯುವ ಹರಿಯಾಣದ ಕೈತಾಲ್ ಮತ್ತು ಕುರುಕ್ಷೇತ್ರ ಜಿಲ್ಲೆಯಲ್ಲಿ ಕಳೆದ ವರ್ಷದಷ್ಟೇ ಭತ್ತವನ್ನು ಖರೀದಿಸಲಾಗುವುದು ಎಂದು ತಿಳಿಸಿದೆ.

ಇಲ್ಲಿಯವರೆಗೆ ಪಂಜಾಬ್‌ನ 3.5 ಲಕ್ಷ ರೈತರಿಗೆ ₹13,211 ಕೋಟಿ ಹಾಗೂ ಹರಿಯಾಣದ 2.75 ಲಕ್ಷ ರೈತರಿಗೆ ₹10,529 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.

ADVERTISEMENT

2024–25ನೇ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್‌–ಸೆಪ್ಟೆಂಬರ್‌) ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ ಮಾರಾಟಕ್ಕೆ ಪಂಜಾಬ್‌ನಲ್ಲಿ 10 ಲಕ್ಷ ಹಾಗೂ ಹರಿಯಾಣದಲ್ಲಿ 4.06 ಲಕ್ಷ ರೈತರು ಹೆಸರು ನೋಂದಾಯಿಸಿದ್ದಾರೆ ಎಂದು ವಿವರಿಸಿದೆ.

ಈ ಎರಡು ರಾಜ್ಯಗಳಲ್ಲಿ ಕ್ರಮವಾಗಿ 185 ಲಕ್ಷ ಟನ್‌ ಹಾಗೂ 60 ಲಕ್ಷ ಟನ್‌ ಭತ್ತ ಖರೀದಿಸಲು ನಿರ್ಧರಿಸಲಾಗಿದೆ. ಹರಿಯಾಣದಲ್ಲಿ ನವೆಂಬರ್‌ 15ಕ್ಕೆ ಖರೀದಿ ಪ್ರಕ್ರಿಯೆ ಪೂರ್ಣಗೊಂಡರೆ, ಪಂಜಾಬ್‌ನಲ್ಲಿ ನವೆಂಬರ್‌ 30ಕ್ಕೆ ಮುಕ್ತಾಯವಾಗಲಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಂಜಾಬ್‌ನಲ್ಲಿ ಶೇ 20.3ರಷ್ಟು (67 ಲಕ್ಷ ಟನ್‌) ಹಾಗೂ ಹರಿಯಾಣದಲ್ಲಿ ಶೇ 13.46ರಷ್ಟು (45 ಲಕ್ಷ ಟನ್‌) ಖರೀದಿ ಪ್ರಮಾಣ ಕಡಿಮೆಯಾಗಿದೆ.

ಪ್ರತಿದಿನ ಈ ರಾಜ್ಯಗಳಿಂದ ಕ್ರಮವಾಗಿ 4 ಲಕ್ಷ ಟನ್‌ ಹಾಗೂ 1.5 ಲಕ್ಷ ಟನ್‌ನಷ್ಟು ಭತ್ತವನ್ನು ಮಂಡಿಗಳಿಂದ ಹೊರಗೆ ಸಾಗಿಸಲಾಗುತ್ತಿದೆ.

ಎಂಎಸ್‌ಪಿ ಎಷ್ಟು?

ಕೇಂದ್ರ ಸರ್ಕಾರವು 2024–25ನೇ ಮಾರುಕಟ್ಟೆ ವರ್ಷಕ್ಕೆ ‘ಎ’ ಗ್ರೇಡ್‌ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹2320 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಿದೆ. ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹2300 ದರ ನಿಗದಿಪಡಿಸಿದೆ. ಖರೀದಿ ಮಾಡಿದ 48 ಗಂಟೆಯೊಳಗೆ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ತೇವಾಂಶ ಹೆಚ್ಚಳ ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಳವಾಗಿತ್ತು. ಇದರಿಂದ ಭತ್ತದಲ್ಲಿಯೂ ತೇವಾಂಶ ಪ್ರಮಾಣ ಹೆಚ್ಚಿತ್ತು. ಹಾಗಾಗಿ ಕಟಾವು ಮತ್ತು ಖರೀದಿಗೆ ವಿಳಂಬವಾಗಿತ್ತು. ಅಕ್ಟೋಬರ್‌ 1ರಿಂದ ಸರ್ಕಾರವು ರೈತರಿಂದ ಭತ್ತ ಖರೀದಿ ಆರಂಭಿಸಿದೆ. ಆ್ಯಪ್‌ ಸೇವೆ ಭತ್ತದ ಗಿರಣಿದಾರರ ಕುಂದುಕೊರತೆ ಆಲಿಸಲು ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಆ್ಯಪ್‌ ಆಧಾರಿತ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ರೂಪಿಸಿದೆ. ನಿಗದಿತ ಕಾಲಮಿತಿಯೊಳಗೆ ಪಾರದರ್ಶಕವಾಗಿ ಸಮಸ್ಯೆ ಆಲಿಸಲು ಇದು ಸಹಕಾರಿಯಾಗಿದೆ ಎಂದು ಎಫ್‌ಸಿಐ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.