ನವದೆಹಲಿ: ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಜೋಡಿಸಲು ನಾಳೆ (ಜೂನ್ 30) ಕೊನೆಯ ದಿನವಾಗಿದೆ.
ಪ್ಯಾನ್ ಕಾರ್ಡ್ ಹಾಗೂ ಆಧಾರ್ ಜೋಡಣೆಗೆ ಕೊನೇ ದಿನಾಂಕವನ್ನು ಕೇಂದ್ರ ಹಣಕಾಸು ಇಲಾಖೆಯು ಈ ಹಿಂದೆ ಮಾರ್ಚ್ 31ಕ್ಕೆ ನಿಗದಿ ಮಾಡಿತ್ತು. ಆದರೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಗಡುವು ವಿಸ್ತರಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ದಿನಾಂಕವನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿತ್ತು.
ಪ್ಯಾನ್ ಕಾರ್ಡ್ ಹಾಗೂ ಆಧಾರ್ ಲಿಂಕ್ ಮಾಡಲು 2022ರ ಮಾರ್ಚ್ 31ರವರೆಗೆ ಉಚಿತವಾಗಿತ್ತು. 2022ರ ಏಪ್ರಿಲ್ 1ರಿಂದ ₹ 500 ಪಾವತಿಸಿ ಆಧಾರ್ ಲಿಂಕ್ ಮಾಡಬೇಕಾಗಿತ್ತು. 2022ರ ಜೂನ್‌ನಿಂದ 2023ರ ಮಾರ್ಚ್ 31ರವರಗೆ ಲಿಂಕ್ ಮಾಡಬೇಕಾದರೆ ₹1,000 ಪಾವತಿಸಬೇಕು ಎಂದು ಹೇಳಲಾಗಿತ್ತು. ಒಂದು ವೇಳೆ ಈ ಗಡುವಿನ ಒಳಗೆ ಲಿಂಕ್ ಮಾಡದಿದ್ದರೇ ಆ ನಂತರ ಬರುವ ಅರ್ಜಿಗಳಿಗೆ ₹10 ಸಾವಿರ ದಂಡ ಹಾಕಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಗುಡುವು ವಿಸ್ತರಣೆಯಾದ ಕಾರಣ ಜೂನ್ 30ರವರೆಗೂ ₹1,000 ಶುಲ್ಕದೊಂದಿಗೆ ಆಧಾರ್–ಪ್ಯಾನ್ ಲಿಂಕ್ ಮಾಡಬಹುದಾಗಿತ್ತು.
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ, ಪ್ಯಾನ್ ಜತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿತ್ತು.
ಪ್ಯಾನ್–ಆಧಾರ್ ಜೋಡಣೆಗೆ ಆಗ ಸರ್ಕಾರವು ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಜೋಡಣೆ ಕಾರ್ಯಗತವಾಗಲಿಲ್ಲ. ಹೀಗಾಗಿ ಪ್ಯಾನ್–ಆಧಾರ್ ಜೋಡಣೆಗೆ ನೀಡಿದ್ದ ಗಡುವನ್ನು ಸರ್ಕಾರವು ಹಲವು ಬಾರಿ ವಿಸ್ತರಿಸಿತ್ತು.
ಜೂನ್ 30ರ ಒಳಗೆ ಪ್ಯಾನ್–ಆಧಾರ್ ಜೋಡಿಸದಿದ್ದರೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಡಿಟಿ), ₹ 10,000 ವಿಧಿಸಲಿದೆ. ಇಲ್ಲವೇ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.
ಈವರೆಗೆ ಒಟ್ಟು 61 ಕೋಟಿ ಪ್ಯಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಈ ಪೈಕಿ ಶೇ 80ಕ್ಕೂ ಹೆಚ್ಚು ಅಂದರೆ 51 ಕೋಟಿಗೂ ಅಧಿಕ ಪ್ಯಾನ್ ಕಾರ್ಡ್‌ಗಳನ್ನು ಆಧಾರ್‌ಗೆ ಜೋಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.