ಬೆಂಗಳೂರು: ಜನರ ಅಗತ್ಯ ಪೂರೈಸಲು ಹಾಗೂ ಆರಾಮದಾಯಕ ಜೀವನಕ್ಕೆ ಬೇಕಾಗುವ ಗುಣಮಟ್ಟದ ವಸ್ತುಗಳನ್ನು ಪೂರೈಸಲು ಕಂಪನಿಯು ಬದ್ಧವಾಗಿದೆ. ಇದಕ್ಕೆ ಅನೇಕ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ವಿದ್ಯುನ್ಮಾನ ಉಪಕರಣಗಳು ಮತ್ತು ಗೃಹೋಪಯೋಗಿ ಉಪಕರಣಗಳ ತಯಾರಿಕಾ ಕಂಪನಿ ಪ್ಯಾನಸೋನಿಕ್‌ನ ಪ್ಯಾನಸೋನಿಕ್ ಲೈಫ್ ಸಲ್ಯೂಷನ್ಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮನೀಶ್ ಶರ್ಮಾ ಹೇಳಿದರು.
1918ರಲ್ಲಿ ಸ್ಥಾಪನೆಯಾದ ಕಂಪನಿಯು ಭಾರತದಲ್ಲಿ 1972ರಲ್ಲಿ ಕಾರ್ಯಾಚರಣೆ ಆರಂಭಿಸಿತು. ಪ್ಯಾನಸೋನಿಕ್ ಪ್ರಸ್ತುತ ದೇಶದಲ್ಲಿ 21 ಶಾಖೆಗಳು, 25 ಗೋದಾಮುಗಳು, 13 ಕಾರ್ಖಾನೆಗಳು, 3 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು, 900ಕ್ಕೂ ಅಧಿಕ ಸೇವಾ ಕೇಂದ್ರಗಳು ಮತ್ತು 11 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದೆ. ಭಾರತದಲ್ಲಿ ಬೆಂಗಳೂರು, ಮುಂಬೈ ಮತ್ತು ಗುರುಗ್ರಾಮದಲ್ಲಿ ಕಚೇರಿ ಹೊಂದಿದೆ ಎಂದು ಗುರುವಾರ ಕಂಪನಿಯು ಆಯೋಜಿಸಿದ್ದ ಇಗ್ನೀಷನ್ ಕಾರ್ಯಕ್ರಮದಲ್ಲಿ ಹೇಳಿದರು.
ಭಾರತವು 1.25 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು 110 ಯೂನಿಕಾರ್ನ್‌ಗಳೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ದೇಶವು ಕಂಪನಿಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯನ್ನು ನೀಡುತ್ತಿದ್ದು, ಕಂಪನಿ ಸಹ ಗುಣಮಟ್ಟದ ವಸ್ತುಗಳನ್ನು ಪೂರೈಸುತ್ತಿದೆ. ಈ ಮೂಲಕ ಭಾರತದ ಗ್ರಾಹಕರ ವಿಶ್ವಾಸವನ್ನು ಗೆದ್ದಿದೆ ಎಂದರು.
2017ರಲ್ಲಿ ಇಂಡಿಯಾ ಇನ್ನೋವೇಶನ್ ಸೆಂಟರ್ ಅನ್ನು (ಐಐಸಿ) ₹240 ಕೋಟಿ ಆರಂಭಿಕ ಹೂಡಿಕೆಯೊಂದಿಗೆ ಸ್ಥಾಪಿಸಿದೆ. ಇದರ ಉದ್ದೇಶವು ತಂತ್ರಜ್ಞಾನ ಆಧಾರಿತ ಆವಿಷ್ಕಾರ ಮತ್ತು ವ್ಯಾಪಾರವನ್ನು ಅಭಿವೃದ್ಧಿಪಡಿಸುವುದಾಗಿದೆ. ಅಂದು ಮಾಡಿದ್ದ ಹೂಡಿಕೆಗಳು ಇಂದು ಫಲ ನೀಡುತ್ತಿವೆ ಎಂದು ಹೇಳಿದರು.
ಪ್ಯಾನಸೋನಿಕ್ ಕಾರ್ಪೊರೇಷನ್ ಮುಖ್ಯ ಪರಿವರ್ತನಾ ಅಧಿಕಾರಿ (ಸಿಟಿಆರ್‌ಒ) ಕುನಿಯೋ ಗೊಹರಾ ಮಾತನಾಡಿ, ಪ್ಯಾನಸೋನಿಕ್ ಕುರಾಶಿ ವಿಷನರಿ ಫಂಡ್ (ಪಿಕೆವಿಎಫ್) ಅನ್ನು ಕಾರ್ಪೊರೇಷನ್ ಸಾಮಾಜಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ನಿಭಾಯಿಸಲು ಸ್ಥಾಪಿಸಿದೆ. ಜನರ ಜೀವನವನ್ನು ಸಮೃದ್ಧಗೊಳಿಸುವ ಮತ್ತು ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಒಟ್ಟು ₹ 450 ಕೋಟಿ ಹೂಡಿಕೆ ಮಾಡಲು ಬದ್ಧವಾಗಿದೆ. ಇದನ್ನು ಜಪಾನ್, ಯುರೋಪ್ ಮತ್ತು ಭಾರತದಲ್ಲಿನ ಸ್ಟಾರ್ಟ್‌ಅಪ್‌ಗಳಾದ್ಯಂತ ಹೂಡಿಕೆ ಮಾಡಲಾಗುತ್ತದೆ. ಯುವ, ಪ್ರತಿಭಾವಂತ ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ಇದರಿಂದ ಸಹಾಯವಾಗಲಿದೆ. ಕೃತಕ ಬುದ್ಧಿಮತ್ತೆ, ಮಾಹಿತಿ ಮತ್ತು ತಂತ್ರಜ್ಞಾನ, ಡೇಟಾ ವಿಶ್ಲೇಷಣೆ ಕ್ಷೇತ್ರದಲ್ಲಿ ಕೆಲವು ಅತ್ಯಾಧುನಿಕ ಹೊಸ ತಂತ್ರಜ್ಞಾನಗಳಿಗೆ ಇದು ಅನುಕೂಲ ಆಗಲಿದೆ ಎಂದರು.
ಲೀಡ್ ಕನ್ಸಲ್ಟೆನ್ಸಿ ರಾಮಕೃಷ್ಣನ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಟಾರ್ಟ್ ಅಪ್‌ಗಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತಿವೆ. ದೇಶದ ಆರ್ಥಿಕತೆ ಬೆಳವಣಿಗೆಯು ವೇಗವಾಗಿದ್ದು, ಇದಕ್ಕೆ ಸ್ಟಾರ್ಟ್‌ಅಪ್‌ಗಳು ಸಹಾಯಕವಾಗಿವೆ ಎಂದರು.
ಪ್ಯಾನಸೋನಿಕ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 12 ಸ್ಟಾರ್ಟ್ಅಪ್‌ಗಳು ಭಾಗವಹಿಸಿ, ತಮ್ಮ ಉತ್ಪನ್ನಗಳ ಹಾಗೂ ಕಂಪನಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಪ್ಯಾನಸೋನಿಕ್ ಇಗ್ನಿಷನ್ ಕಾರ್ಯಕ್ರಮದ ವಿಜೇತರನ್ನು ಘೋಷಿಸಲಾಯಿತು.
ಕಾರ್ಯಕ್ರಮದಲ್ಲಿ 100 ಎಕ್ಸ್ ವಿಸಿ ಸಂಸ್ಥಾಪಕ ಮತ್ತು ಸಿಎಫ್‌ಒ ಯಜ್ಞೇಶ್ ಸಂಘರಾಜ್ಕ, ಮನೀಶ್ ಮಿಶ್ರಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.