ADVERTISEMENT

ಮೀಸಲು ನಿಧಿ: ಸಮಿತಿಗೆ ಶೀಘ್ರ ಸದಸ್ಯರ ನೇಮಕ

ಪಿಟಿಐ
Published 25 ನವೆಂಬರ್ 2018, 20:00 IST
Last Updated 25 ನವೆಂಬರ್ 2018, 20:00 IST
   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮೀಸಲು ನಿಧಿಗೆ ಹೊಸ ನಿಯಮ ರೂಪಿಸಲು ರಚಿಸಲು ಉದ್ದೇಶಿಸಿರುವ ಪರಿಣತರ ಸಮಿತಿಗೆ ಈ ವಾರ ಸದಸ್ಯರನ್ನು ನೇಮಕ ಮಾಡುವ ಸಾಧ್ಯತೆ ಇದೆ.

ಸಮಿತಿಯ ಸದಸ್ಯರ ನೇಮಕ ಮತ್ತು ಸಮಿತಿಯ ಪರಿಶೀಲನೆಗೆ ಒಪ್ಪಿಸಲಿರುವ ವಿಷಯಗಳನ್ನು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಜಂಟಿಯಾಗಿ ನಿರ್ಧರಿಸಲಿವೆ. ಹಣಕಾಸು ಸಚಿವಾಲಯವು ಐದಾರು ದಿನಗಳಲ್ಲಿ ಸದಸ್ಯರ ಹೆಸರನ್ನು ಅಂತಿಮಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸಮಿತಿಯು ಕನಿಷ್ಠ ಮೂವರು ಸದಸ್ಯರನ್ನು ಒಳಗೊಂಡಿರಲಿದೆ. ಆರ್‌ಬಿಐನ ಹಾಲಿ ಮತ್ತು ಹಿಂದಿನ ಉನ್ನತ ಅಧಿಕಾರಿಗಳು ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ಒಳಗೆ ಸಮಿತಿಯು ತನ್ನ ವರದಿ ಸಲ್ಲಿಸುವ ನಿರೀಕ್ಷೆ ಇದೆ.

ADVERTISEMENT

ಈ ವರ್ಷದ ಜೂನ್‌ ವೇಳೆಗೆ ಆರ್‌ಬಿಐ ಬಳಿ ₹ 9.43 ಲಕ್ಷ ಕೋಟಿಗಳಷ್ಟು ಮೀಸಲು ನಿಧಿ ಇದೆ. ಇದರಲ್ಲಿ, ಭವಿಷ್ಯದಲ್ಲಿನ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಪ್ರತ್ಯೇಕವಾಗಿ ತೆಗೆದು ಇರಿಸಿದ ‘ತುರ್ತು ನಿಧಿ’ಯ ಮೊತ್ತವು ₹ 2.32 ಲಕ್ಷ ಕೋಟಿಗಳಷ್ಟಿದೆ. ಕರೆನ್ಸಿ ಮತ್ತು ಚಿನ್ನದ ಮರುಮೌಲ್ಯಮಾಪನ ಖಾತೆಯಲ್ಲಿ ₹6.91 ಲಕ್ಷ ಕೋಟಿಗಳಷ್ಟಿದೆ. ಆರ್‌ಬಿಐನ ಒಟ್ಟಾರೆ ಸಂಪತ್ತಿನಲ್ಲಿ ‘ತುರ್ತು ನಿಧಿ’ ಪ್ರಮಾಣ ಶೇ 6.41 ರಷ್ಟಿದೆ.

ಈ ಹಿಂದೆಯೂ ಆರ್‌ಬಿಐನ ಆದರ್ಶ ಸ್ವರೂಪದ ಮೀಸಲು ನಿಧಿ ನಿಗದಿಪಡಿಸಲು ವಿ. ಸುಬ್ರಹ್ಮಣ್ಯಂ (1997), ಉಷಾ ಥೋರಟ್‌ (2004) ಮತ್ತು ವೈ. ಎಚ್‌. ಮಾಲೆಗಂ (2013) ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿತ್ತು.

ಕೇಂದ್ರೀಯ ಬ್ಯಾಂಕ್‌ನ ಮೀಸಲು ನಿಧಿಯ ಕೆಲ ಭಾಗವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವುದಕ್ಕೆ ಸಂಬಂಧಿಸಿದ ಬೇಡಿಕೆಯು ಈಗ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.