ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ತೆರಿಗೆ ಪ್ರಮಾಣ ಸರಳೀಕರಣ ಹಾಗೂ ಆರೋಗ್ಯ, ಜೀವ ವಿಮೆ ಕಂತಿನ ಮೇಲೆ ವಿಧಿಸಿರುವ ಜಿಎಸ್‌ಟಿ ಕಡಿಮೆಗೊಳಿಸುವುದಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಚಿವರ ಸಮಿತಿಗಳ ಸಭೆಯು ಅಕ್ಟೋಬರ್ 19ರಂದು ನಡೆಯಲಿದೆ.
ವಿಮೆ ಸಂಬಂಧ ರಚಿಸಿರುವ ಸಮಿತಿಯಲ್ಲಿ 13 ಸಚಿವರಿದ್ದು, ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಇದರ ಅಧ್ಯಕ್ಷರಾಗಿದ್ದಾರೆ. ಇದು ಸಮಿತಿಯ ಮೊದಲ ಸಭೆಯಾಗಿದೆ.
ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ, ಗೋವಾ, ಗುಜರಾತ್, ಮೇಘಾಲಯ, ಪಂಜಾಬ್, ತಮಿಳುನಾಡು, ತೆಲಂಗಾಣದ ಸಚಿವರಿದ್ದಾರೆ.
ಸದ್ಯ ವಿಮೆ ಕಂತಿನ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ರದ್ದುಪಡಿಸಬೇಕು ಅಥವಾ ಕಡಿಮೆಗೊಳಿಸಬೇಕು ಎಂಬ ಒತ್ತಾಯ ಹೆಚ್ಚಿದೆ. ಈ ಬಗ್ಗೆ ಪರಿಶೀಲಿಸಿ ಜಿಎಸ್‌ಟಿ ಮಂಡಳಿಗೆ ಈ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ.
ಜಿಎಸ್‌ಟಿ ಸರಳೀಕರಣ: ಜಿಎಸ್‌ಟಿ ಸರಳೀಕರಣ ಸಂಬಂಧ ರಚಿಸಿರುವ ಸಮಿತಿಗೂ ಸಾಮ್ರಾಜ್ ಚೌಧರಿ ಅವರೇ ಅಧ್ಯಕ್ಷರಾಗಿದ್ದು, ಆರು ಸಚಿವರು ಇದ್ದಾರೆ.
ಜಿಎಸ್‌ಟಿ ಅಡಿ ರಚಿಸಿರುವ ನಾಲ್ಕು ಸ್ಲ್ಯಾಬ್‌ಗಳ ಪರಿಷ್ಕರಣೆ ಬಗ್ಗೆ ಸಮಿತಿಯು ಸಮಾಲೋಚಿಸಲಿದೆ. ಶೇ 12 ಮತ್ತು ಶೇ 18ರ ಸ್ಲ್ಯಾಬ್ ಅನ್ನು ವಿಲೀನಗೊಳಿಸುವ ಬಗ್ಗೆಯೂ ಚರ್ಚಿಸಿ ಮಂಡಳಿಗೆ ವರದಿ ಸಲ್ಲಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.