ನವದೆಹಲಿ: 2023–24ರ ಹಣಕಾಸು ವರ್ಷದ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ 14.70 ಲಕ್ಷ ಟನ್ ಕಾಗದ ಮತ್ತು ಕಾಗದದ ಹಾಳೆಗಳು (ಪೇಪರ್–ಪೇಪರ್ ಬೋರ್ಡ್ಸ್) ಆಮದಾಗಿವೆ. ಈ ಆಮದು ಸ್ಥಳೀಯ ಕಾಗದ ಕಾರ್ಖಾನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಭಾರತೀಯ ಕಾಗದ ತಯಾರಕರ ಸಂಸ್ಥೆ (ಐಪಿಎಂಎ) ಭಾನುವಾರ ಹೇಳಿದೆ.
2022–23ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ 10.07 ಲಕ್ಷ ಟನ್ ಆಮದಾಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಶೇ 37ರಷ್ಟು ಏರಿಕೆಯಾಗಿದೆ. ಬರವಣಿಗೆ, ಮುದ್ರಣ ಕಾಗದ ಸೇರಿದಂತೆ ಎಲ್ಲ ದರ್ಜೆಯ ಕಾಗದವು ಆಮದಾಗಿವೆ ಎಂದು ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ₹10 ಸಾವಿರ ಕೋಟಿ ಮೌಲ್ಯದ ಕಾಗದ ಮತ್ತು ಪೇಪರ್ ಬೋರ್ಡ್ಸ್ ಆಮದಾಗಿವೆ. ಇದು ಮೇಕ್ ಇನ್ ಇಂಡಿಯಾಗೆ ಮತ್ತು ಕಾಗದದ ಉದ್ಯಮವನ್ನು ನಂಬಿರುವ 5 ಲಕ್ಷ ಜನರ ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ ಎಂದು ಐಪಿಎಂಎ ಅಧ್ಯಕ್ಷ ಪವನ್ ಅಗರ್ವಾಲ್ ಹೇಳಿದ್ದಾರೆ.
ದೇಶದಲ್ಲಿ ಬಹುತೇಕ ಎಲ್ಲ ರೀತಿಯ ಕಾಗದವನ್ನು ತಯಾರಿಸಲು ಬೇಕಾದ ಸಾಮರ್ಥ್ಯವಿದೆ. ಆದರೆ, ಇಂತಹ ಆಮದು ದೇಶದ ಕಾಗದದ ಕಾರ್ಖಾನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅಗರ್ವಾಲ್ ಹೇಳಿದ್ದಾರೆ.
ಸರ್ಕಾರದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿನ 900 ಕಾಗದ ಕಾರ್ಖಾನೆಗಳ ಪೈಕಿ 553 ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ.
ಆಮದು ಹೆಚ್ಚಳಕ್ಕೆ ಕಾರಣವೇನು?:
ಆಸಿಯಾನ್-ಭಾರತ ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿನ ಶೂನ್ಯ ಆಮದು ಸುಂಕದಿಂದಾಗಿ ಆಸಿಯಾನ್‌ನಿಂದ ಬರುವ ಪೇಪರ್ ಮತ್ತು ಪೇಪರ್ ಬೋರ್ಡ್‌ನ ಆಮದುಗಳಲ್ಲಿ ಶೇ 142ರಷ್ಟು ಹೆಚ್ಚಾಗಿದೆ.
ಏಷ್ಯಾ ಪೆಸಿಫಿಕ್ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಚೀನಾಕ್ಕೆ ಆಮದು ಸುಂಕದ ರಿಯಾಯಿತಿಗಳು ಸಹ ಕಾಗದದ ಆಮದನ್ನು ಹೆಚ್ಚಿಸಿವೆ.
ಕೆಲವು ದೇಶಗಳು ತಮ್ಮ ಕಾಗದ ಕಾರ್ಖಾನೆಗಳಿಗೆ ಗಣನೀಯವಾದ ಸಬ್ಸಿಡಿ ನೀಡುತ್ತಿವೆ. ಇದು ಭಾರತೀಯ ಕಾಗದ ಕಾರ್ಖಾನೆಗಳಿಗೆ ಹೋಲಿಸಿದರೆ ಹೆಚ್ಚಿದೆ ಎಂದು ಐಪಿಎಂಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.