ADVERTISEMENT

ಬಳಕೆ ಪ್ರಮಾಣ ಶೇ 7ರಷ್ಟು ಏರಿಕೆ: ಕಾಗದ ಕಾರ್ಖಾನೆಗೆ ಕಚ್ಚಾ ಸರಕು ಕೊರತೆ

ಪಿಟಿಐ
Published 4 ಮೇ 2024, 14:29 IST
Last Updated 4 ಮೇ 2024, 14:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ದೇಶದಲ್ಲಿರುವ ಕಾಗದ ಕೈಗಾರಿಕೆಗಳು ಕಚ್ಚಾ ಸರಕಿನ ಕೊರತೆ ಎದುರಿಸುತ್ತಿವೆ. ಹಾಗಾಗಿ, ಪಲ್ಪ್‌ವುಡ್‌ ಪ್ಲಾಂಟೇಷನ್‌ಗಾಗಿ ಸರ್ಕಾರಕ್ಕೆ ಸೇರಿದ ಪಾಳುಬಿದ್ದಿರುವ ಜಮೀನನ್ನು ದೀರ್ಘಕಾಲದವರೆಗೆ ಕಾರ್ಖಾನೆಗಳಿಗೆ ಗುತ್ತಿಗೆ ನೀಡಬೇಕು ಎಂದು ಭಾರತೀಯ ಕಾಗದ ತಯಾರಕರ ಸಂಘ (ಐಪಿಎಂಎ) ಒತ್ತಾಯಿಸಿದೆ.

ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಾಳು ಭೂಮಿ ಇದೆ. ಇದರಲ್ಲಿ ಅಲ್ಪ ಪ್ರಮಾಣದಲ್ಲಿ ಕಾಗದ ಕಾರ್ಖಾನೆಗಳಿಗೆ ಗುತ್ತಿಗೆ ನೀಡಿದರೆ ಈ ವಲಯದ ಅಭಿವೃದ್ಧಿಯಾಗಲಿದೆ. ಜೊತೆಗೆ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ನೆರವಾಗಲಿದೆ ಎಂದು ಹೇಳಿದೆ.

ADVERTISEMENT

ಕಾಗದ ತಯಾರಿಕೆಗೆ ಬಳಸುವ ಮರದ ತಿರುಳಿನ ಕೊರತೆ ಇದೆ. ಇದನ್ನು ಅವಲಂಬಿಸಿರುವ ಕಾರ್ಖಾನೆಗಳು ಸಂಕಷ್ಟಕ್ಕೆ ಸಿಲುಕಿವೆ. ಕೃಷಿ ಅರಣ್ಯ ಅಭಿವೃದ್ಧಿಗೆ ಉತ್ತೇಜನ ನೀಡಿದರೆ ದೇಶೀಯಮಟ್ಟದಲ್ಲಿನ ಕಾಗದದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.‌

ಪ್ರತಿವರ್ಷ ದೇಶದಲ್ಲಿ ಕಾಗದದ ಬಳಕೆ ಪ್ರಮಾಣವು ವಾರ್ಷಿಕ ಶೇ 6ರಿಂದ 7ರಷ್ಟು ಏರಿಕೆಯಾಗುತ್ತಿದೆ ಎಂದು ಹೇಳಿದೆ.

‘ಕಾರ್ಖಾನೆಗಳಿಗೆ ಪಾಳು ಬಿದ್ದಿರುವ ಜಮೀನನ್ನು ಗುತ್ತಿಗೆ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಕಾಗದ ತಯಾರಿಕೆಗೆ ಅಗತ್ಯವಿರುವ ಮರಗಳನ್ನು ಬೆಳೆಸುವುದರಿಂದ ಮರ ಆಧಾರಿತ ಕಾರ್ಖಾನೆಗಳಿಗೂ ಅನುಕೂಲವಾಗಲಿದೆ. ಜೊತೆಗೆ, ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜನರಿಗೆ ಉದ್ಯೋಗವೂ ದೊರೆಯಲಿದೆ’ ಎಂದು ಸಂಘದ ಅಧ್ಯಕ್ಷ ಪವನ್ ಅಗರ್ವಾಲ್ ಹೇಳಿದ್ದಾರೆ.

‘ದೇಶೀಯವಾಗಿ ಕೃಷಿ ಅರಣ್ಯ ಅಭಿವೃದ್ಧಿಗೆ ಉತ್ತೇಜನ ನೀಡದಿದ್ದರೆ ರದ್ದಿ ಕಾಗದ ಮತ್ತು ಮರದ ತಿರುಳಿನ ಆಮದು ಮೇಲೆ ಅವಲಂಬನೆ ಹೆಚ್ಚಲಿದೆ. ಇದು ಕಾಗದ ಕೈಗಾರಿಕೆ ಮತ್ತು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.