ADVERTISEMENT

ಪಾರ್ಲೆ–ಜಿಗೆ ಜಿಎಸ್‌ಟಿ ಹೊಡೆತ: 10 ಸಾವಿರ ಉದ್ಯೋಗ ಕಡಿತ?

ದುಬಾರಿ ಜಿಎಸ್‌ಟಿ: ಗ್ರಾಮೀಣ ಪ್ರದೇಶದಲ್ಲಿ ಬಿಸ್ಕತ್ ಬೇಡಿಕೆ ಕುಸಿತ

ರಾಯಿಟರ್ಸ್
Published 22 ಆಗಸ್ಟ್ 2019, 1:52 IST
Last Updated 22 ಆಗಸ್ಟ್ 2019, 1:52 IST
ಪಾರ್ಲೆ–ಜಿ ಬಿಸ್ಕಿಟ್‌
ಪಾರ್ಲೆ–ಜಿ ಬಿಸ್ಕಿಟ್‌   

ಬೆಂಗಳೂರು: ಮನೆ ಮಾತಾಗಿರುವ ಪಾರ್ಲೆ–ಜಿ ಬಿಸ್ಕತ್ ತಯಾರಿಸುವ ಪಾರ್ಲೆ ಪ್ರಾಡಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌, 10 ಸಾವಿರ ಉದ್ಯೋಗ ಕಡಿತ ಮಾಡಲು ಚಿಂತನೆ ನಡೆಸುತ್ತಿದೆ.

ವಿಶ್ವದ ಮೂರನೆ ಅತಿದೊಡ್ಡ ಆರ್ಥಿಕತೆಯಲ್ಲಿ ಕಾರ್‌, ಬೈಕ್‌ಗಳಿಂದ ಬಟ್ಟೆ ತನಕ ಬಹುತೇಕ ಸರಕುಗಳ ಬೇಡಿಕೆ ಕುಸಿಯುತ್ತಿದೆ. ಈ ಸಾಲಿಗೆ ಈಗ ಜನಪ್ರಿಯ ಬ್ರ್ಯಾಂಡ್‌ನ ಬಿಸ್ಕತ್ ಕೂಡ ಸೇರಿಕೊಂಡಿದೆ. ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ತಯಾರಿಕೆ ಕಡಿತಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಇದರಿಂದ ಸಹಜವಾಗಿಯೇ ಉದ್ಯೋಗಕ್ಕೆ ಕತ್ತರಿ ಬೀಳುತ್ತಿದೆ.

‘ಗ್ರಾಮೀಣ ಪ್ರದೇಶದಲ್ಲಿ ಬಿಸ್ಕತ್ ಬೇಡಿಕೆಯು ಗಮನಾರ್ಹ ಕುಸಿತ ಕಂಡಿರುವುದು ಮತ್ತು ದೇಶಿ ಆರ್ಥಿಕತೆ ಮಂದ ಗತಿಯ ಕಾರಣಕ್ಕೆ ತಯಾರಿಕೆ ಕಡಿತಗೊಳಿಸಬೇಕಾಗಿದೆ. ಇದರಿಂದಾಗಿ ಮುಂದಿನ ಒಂದು ವರ್ಷದಲ್ಲಿ 8 ಸಾವಿರದಿಂದ 10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ’ ಎಂದು ಕಂಪನಿಯ ಬಿಸ್ಕತ್ ಮಾರಾಟ ವಿಭಾಗದ ಮುಖ್ಯಸ್ಥ ಮಯಂಕ ಶಾ ಹೇಳಿದ್ದಾರೆ.

ADVERTISEMENT

‘ಜಿಎಸ್‌ಟಿ ಜಾರಿಗೆ ಬಂದ ನಂತರ ಬಿಸ್ಕತ್ ಬೇಡಿಕೆ ಗಮನಾರ್ಹವಾಗಿ ಕುಸಿತ ಕಂಡಿದೆ. ಆರಂಭದಲ್ಲಿ ಶೇ 18ರಷ್ಟಿದ್ದ ದುಬಾರಿ ತೆರಿಗೆ ಕಾರಣಕ್ಕೆ ಪ್ರತಿ ಪ್ಯಾಕ್‌ನಲ್ಲಿ ಬಿಸ್ಕತ್ ಸಂಖ್ಯೆಯನ್ನು ಕಡಿಮೆ ಮಾಡಬೇಕಾಯಿತು. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಕಡಿಮೆ ಆದಾಯದ ಗ್ರಾಹಕರಿಂದ ಗಮನಾರ್ಹ ಪ್ರಮಾಣದಲ್ಲಿ ಬೇಡಿಕೆ ಕುಸಿಯಲಾರಂಭಿಸಿತು. ಬಿಸ್ಕಿಟ್‌ ವಹಿವಾಟು ಪ್ರಗತಿಯು ಈಗ ಶೇ 2.5ಕ್ಕೆ ಇಳಿದಿದೆ.

‘ಗ್ರಾಹಕರು ಬೆಲೆ ಬಗ್ಗೆ ಹೆಚ್ಚು ಸೂಕ್ಷ್ಮ ನಿಲುವು ತಳೆದಿರುತ್ತಾರೆ. ನಿರ್ದಿಷ್ಟ ಬೆಲೆಗೆ ತಮಗೆ ಎಷ್ಟು ಬಿಸ್ಕತ್ ದೊರೆಯಲಿವೆ ಎನ್ನುವುದನ್ನು ಅವರು ಲೆಕ್ಕ ಹಾಕುತ್ತಾರೆ. ಕಂಪನಿಯ ವರಮಾನದಲ್ಲಿ ಅರ್ಧದಷ್ಟು ಕೊಡುಗೆ ನೀಡುವ ಗ್ರಾಮೀಣ ಪ್ರದೇಶದ ಗ್ರಾಹಕರಿಂದ ಬೇಡಿಕೆ ಕುಸಿದಿರುವುದು ಕಂಪನಿಯ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ವಾಹನ ಮತ್ತು ಬಿಡಿಭಾಗ ತಯಾರಿಕೆ ಉದ್ದಿಮೆಯಲ್ಲಿನ ಉದ್ಯೋಗ ನಷ್ಟವು ಬಿಸ್ಕತ್‌ನಂತಹ ದಿನಬಳಕೆಯ ಸರಕುಗಳ ಬೇಡಿಕೆ ಇನ್ನಷ್ಟು ಕುಸಿಯಲು ಕಾರಣವಾಗಲಿದೆ’ ಎಂದು ಶಾ ಹೇಳಿದ್ದಾರೆ.

ಬ್ರಿಟಾನಿಯಾ ಇಂಡಸ್ಟ್ರೀಸ್‌ ಕಳವಳ: ತಯಾರಿಕೆ ಕಡಿತವು ಪಾರ್ಲೆ–ಜಿಗೆ ಮಾತ್ರ ಸೀಮಿತಗೊಂಡಿಲ್ಲ. ‘ಪಾರ್ಲೆ–ಜಿ’ಯ ಪ್ರಮುಖ ಪ್ರತಿಸ್ಪರ್ಧಿ ಸಂಸ್ಥೆ ಬ್ರಿಟಾನಿಯಾ ಇಂಡಸ್ಟ್ರೀಸ್‌ಗೂ ಇದರ ಬಿಸಿ ತಟ್ಟಿದೆ.

‘ಗ್ರಾಹಕರು ಕೇವಲ ಐದು ರೂಪಾಯಿಯ ಉತ್ಪನ್ನ ಖರೀದಿಸಲೂ ಎರಡೆರಡು ಬಾರಿ ಯೋಚಿಸುತ್ತಿದ್ದಾರೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವರುಣ ಬೆರ್ರಿ ಅವರು ಒಂದು ತಿಂಗಳ ಹಿಂದೆಯೇ ಹೇಳಿದ್ದರು.

ಸಿಬ್ಬಂದಿ ಸಂಖ್ಯೆ 1 ಲಕ್ಷ

1929ರಲ್ಲಿ ಸ್ಥಾಪನೆಗೊಂಡಿರುವ ಪಾರ್ಲೆ ಕಂಪನಿಯ 10 ತಯಾರಿಕಾ ಘಟಕಗಳಿವೆ. 125 ಗುತ್ತಿಗೆ ತಯಾರಿಕಾ ಘಟಕಗಳಿವೆ. ಪೂರ್ಣಾವಧಿ ಮತ್ತು ಗುತ್ತಿಗೆ ಸೇರಿದಂತೆ ಒಟ್ಟಾರೆ ಸಿಬ್ಬಂದಿ ಸಂಖ್ಯೆ 1 ಲಕ್ಷ ಇದೆ.

ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪನಿಯು ಈ ಹಿಂದೆ ಪಾರ್ಲೆ ಗ್ಲುಕೊ ಹೆಸರು ಹೊಂದಿತ್ತು. ‘‍‍ಪಾರ್ಲೆ–ಜಿ’ ಬ್ರ್ಯಾಂಡ್‌ ಎಂದು ಹೆಸರು ಬದಲಿಸಿದ ನಂತರ ಈ ಬಿಸ್ಕತ್ ಮನೆ ಮಾತಾಯಿತು. 2003ರಲ್ಲಿ ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಬಿಸ್ಕತ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಂಪನಿಯು ₹ 9,800 ಕೋಟಿಗಳ ವಾರ್ಷಿಕ ವರಮಾನ ಹೊಂದಿದೆ.

ಚಹ ಉದ್ದಿಮೆಯಲ್ಲೂ ಬಿಕ್ಕಟ್ಟು

ಗುವಾಹಟಿ: ವಾಹನ, ರಿಯಲ್‌ ಎಸ್ಟೇಟ್‌, ಬಿಸ್ಕತ್‌ ತಯಾರಿಕೆ ಉದ್ದಿಮೆ ಎದುರಿಸುತ್ತಿರುವ ಬಿಕ್ಕಟ್ಟಿಗೆ ಈಗ ಚಹ ಉತ್ಪಾದನೆಯೂ ಸೇರಿಕೊಂಡಿದೆ.

ಪೂರೈಕೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳ, ಬಳಕೆ, ಬೆಲೆ, ರಫ್ತು ಕುಸಿತ ಮತ್ತು ದುಡಿಯುವ ಬಂಡವಾಳಕ್ಕೆ ಬ್ಯಾಂಕ್‌ಗಳು ಸಾಲ ನೀಡದ ಕಾರಣಕ್ಕೆ ಬಿಕ್ಕಟ್ಟು ತೀವ್ರಗೊಂಡಿದೆ. ಭವಿಷ್ಯವೂ ಮಸುಕಾಗಿದೆ ಎಂದು ಭಾರತೀಯ ಚಹ ಸಂಘ (ಐಟಿಎ) ಕಳವಳ ವ್ಯಕ್ತಪಡಿಸಿದೆ.


* ಪರಿಸ್ಥಿತಿ ಎಷ್ಟು ಕೈಮೀರಿದೆ ಎಂದರೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸದಿದ್ದರೆ ಉದ್ಯೋಗ ಕಡಿತ ಅನಿವಾರ್ಯವಾಗಲಿದೆ

-ಮಯಂಕ ಶಾ ಪಾರ್ಲೆ ಬಿಸ್ಕತ್ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.