ನವದೆಹಲಿ: ನಿರ್ದಿಷ್ಟ ಮಾರ್ಗಕ್ಕೆ ಅನುಗುಣವಾಗಿ ವಿಮಾನ ಪ್ರಯಾಣ ದರವನ್ನು ನಿಗದಿಪಡಿಸುವ ಜೊತೆಗೆ ಎಗ್ಗಿಲ್ಲದೆ ಏರಿಸುವ ಟಿಕೆಟ್ ದರಕ್ಕೆ ಕಡಿವಾಣ ಹಾಕಲು ಪ್ರತ್ಯೇಕ ಘಟಕ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ, ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ಹಬ್ಬದ ಋತು ಹಾಗೂ ರಜಾ ದಿನಗಳಲ್ಲಿ ವಿಮಾನದ ಟಿಕೆಟ್ ದರ ದುಪ್ಪಟ್ಟಾಗುತ್ತದೆ. ಇದರಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುತ್ತಾರೆ. ಹಾಗಾಗಿ, ವಿಮಾನಯಾನ ಕಂಪನಿಗಳು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ ಎಂದು ನಾಗರಿಕ ವಿಮಾನ ಸಚಿವಾಲಯದ ವಿಷಯಗಳಿಗೆ ಸಂಬಂಧಿಸಿದಂತೆ ರಚಿಸಿರುವ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಂಸದೀಯ ಸಮಿತಿಯು ಈ ಶಿಫಾರಸು ಮಾಡಿದೆ.
ಪ್ರಸ್ತುತ ಟಿಕೆಟ್ ದರಕ್ಕೆ ಸಂಬಂಧಿಸಿದಂತೆ ಕಂಪನಿಗಳು ಅಳವಡಿಸಿಕೊಂಡಿರುವ ಸ್ವಯಂ ನಿಯಂತ್ರಣ ವ್ಯವಸ್ಥೆಯು ಪರಿಣಾಮಕಾರಿಯಾಗಿಲ್ಲ. ದರ ನಿಯಂತ್ರಣಕ್ಕಾಗಿ ರಚಿಸುವ ಘಟಕಕ್ಕೆ ಅರೆ ನ್ಯಾಯಿಕ ಅಧಿಕಾರ ನೀಡಬೇಕು ಎಂದು ಹೇಳಿದೆ.
‘ಕೆಲವು ಸಂದರ್ಭಗಳಲ್ಲಿ ದರವನ್ನು ವಿಪರೀತವಾಗಿ ಏರಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ಮೂಲಕವೂ ದರ ನಿಯಂತ್ರಣ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿದೆ ಎಂದು ಹೇಳಿದೆ.
ಸದ್ಯ ವಿಮಾನದ ಟಿಕೆಟ್ ದರ ನಿಗದಿಪಡಿಸುವುದು ಅಥವಾ ನಿಯಂತ್ರಿಸುವುದು ಕೇಂದ್ರ ಸರ್ಕಾರದ ಸುಪರ್ದಿಗೆ ಒಳಪಟ್ಟಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.