ADVERTISEMENT

ಪ್ರಯಾಣಿಕ ವಾಹನ ಮಾರಾಟ ಇಳಿಕೆ

ಪಿಟಿಐ
Published 6 ಜುಲೈ 2024, 15:16 IST
Last Updated 6 ಜುಲೈ 2024, 15:16 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ದೇಶದಲ್ಲಿ ಜೂನ್‌ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಚಿಲ್ಲರೆ ಮಾರಾಟದಲ್ಲಿ ಶೇ 7ರಷ್ಟು ಇಳಿಕೆಯಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ.

ಕಳೆದ ವರ್ಷದ ಜೂನ್‌ನಲ್ಲಿ 3.02 ಲಕ್ಷ ವಾಹನಗಳು ಮಾರಾಟವಾಗಿದ್ದವು. ಪ್ರಸಕ್ತ ವರ್ಷದ ಜೂನ್‌ನಲ್ಲಿ 2.81 ಲಕ್ಷ ವಾಹನಗಳು ಮಾರಾಟವಾಗಿವೆ. ಬಿಸಿ ಗಾಳಿಯಿಂದಾಗಿ ಷೋರೂಂಗಳಿಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆಯಲ್ಲಿ ಶೇ 15ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ. 

‘ವಾಹನಗಳ ಲಭ್ಯತೆ ಹಾಗೂ ರಿಯಾಯಿತಿ ಸೌಲಭ್ಯವು ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಉತ್ತೇಜಿಸಲು ನೆರವಾಗಿದೆ. ಆದರೆ, ಮುಂಗಾರು ಆಗಮನ ವಿಳಂಬದಿಂದಾಗಿ ಬಿಸಿ ಗಾಳಿಯು ಹೆಚ್ಚಿದೆ. ಇದರಿಂದ ಮಾರುಕಟ್ಟೆಯ ನಿರೀಕ್ಷಿತ ಗುರಿ ಸಾಧನೆಗೆ ತೊಡಕಾಗಿದೆ’ ಎಂದು ಎಫ್‌ಎಡಿಎ ಅಧ್ಯಕ್ಷ ಮನೀಶ್ ರಾಜ್ ಸಿಂಘಾನಿಯಾ ತಿಳಿಸಿದ್ದಾರೆ.

ADVERTISEMENT

ಗ್ರಾಹಕರು ವಾಹನಗಳ ಬೇಡಿಕೆಗೆ ಕೋರಿಕೆ ಸಲ್ಲಿಸಿರುವುದು ಕಡಿಮೆಯಾಗಿದೆ. ಬಹಳಷ್ಟು ಗ್ರಾಹಕರು ಖರೀದಿ ನಿರ್ಧಾರವನ್ನು ಮುಂದೂಡಿರುವ ಬಗ್ಗೆ ಡೀಲರ್‌ಗಳು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 5ರಷ್ಟು ಏರಿಕೆಯಾಗಿದ್ದು, ಒಟ್ಟು 13.75 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. 

ದೇಶದ ಗ್ರಾಮೀಣ ಪ್ರದೇಶದಲ್ಲಿ ಮೇ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು ಶೇ 59.3ರಷ್ಟಿತ್ತು. ಜೂನ್‌ನಲ್ಲಿ ಶೇ 58.6ರಷ್ಟಕ್ಕೆ ಇಳಿಕೆಯಾಗಿದೆ. ಮುಂಗಾರು ಮಳೆಯ ಕೊರತೆ ಹಾಗೂ ಲೋಕಸಭಾ ಚುನಾವಣೆಯು ಗ್ರಾಮೀಣ ಪ್ರದೇಶದಲ್ಲಿ ವಾಹನಗಳ ಮಾರಾಟದಲ್ಲಿನ ಇಳಿಕೆಗೆ ಕಾರಣವಾಗಿದೆ ಎಂದು ಹೇಳಿದೆ. 

ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 5ರಷ್ಟು ಕುಸಿತವಾಗಿದ್ದು, ಒಟ್ಟು 72,747 ವಾಹನಗಳು ಮಾರಾಟವಾಗಿವೆ. ಟ್ರ್ಯಾಕ್ಟರ್‌ ಮಾರಾಟದಲ್ಲಿ ಶೇ 28ರಷ್ಟು ಇಳಿಕೆಯಾಗಿದ್ದು, 71,029 ಟ್ರ್ಯಾಕ್ಟರ್‌ಗಳು ಮಾರಾಟವಾಗಿವೆ. 

ಆದರೆ, ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇ 5ರಷ್ಟು ಹೆಚ್ಚಳವಾಗಿದ್ದು, 94,321 ವಾಹನಗಳು ಮಾರಾಟವಾಗಿವೆ. 

ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಹಾಗಾಗಿ, ಗ್ರಾಮೀಣ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚಳವಾಗುವ ನಿರೀಕ್ಷೆಯಿದೆ. ಆದರೆ, ಕೃಷಿ ವಲಯದಲ್ಲಿನ ನಗದು ಹರಿವಿನ ಕೊರತೆ ಹಾಗೂ ಪ್ರಾದೇಶಿಕ ಮಾರುಕಟ್ಟೆಗಳ ಏರಿಳಿತವು ಸವಾಲಾಗಿದೆ ಎಂದು ಎಫ್‌ಎಡಿಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.