ನವದೆಹಲಿ: ಪ್ರಯಾಣಿಕ ವಾಹನಗಳ ಸಗಟು ಮಾರಾಟವು 2021ರ ಮಾರ್ಚ್‌ಗೆ ಹೋಲಿಸಿದರೆ 2022ರ ಮಾರ್ಚ್‌ನಲ್ಲಿ ಶೇಕಡ 4ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಬುಧವಾರ ಹೇಳಿದೆ.
2021ರ ಮಾರ್ಚ್‌ನಲ್ಲಿ 2.90 ಲಕ್ಷ ವಾಹನಗಳು ಮಾರಾಟ ಆಗಿದ್ದವು. ಇದಕ್ಕೆ ಹೋಲಿಸಿದರೆ 2022ರ ಮಾರ್ಚ್‌ನಲ್ಲಿ 2.79 ಲಕ್ಷಕ್ಕೆ ಇಳಿಕೆ ಆಗಿದೆ.
ದೇಶದ ವಾಹನ ಉದ್ಯಮವು ಹಲವು ಸವಾಲುಗಳನ್ನು ಎದುರಿಸಿದೆ. ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು, ಬಿಡಿಭಾಗಗಳ ಕೊರತೆ, ನಿರ್ವಹಣಾ ವೆಚ್ಚ, ಹೊಸ ತಂತ್ರಜ್ಞಾನಗಳಲ್ಲಿ ಹೂಡಿಕೆಯಂತಹ ಸಮಸ್ಯೆಗಳು ಎದುರಾದವು. ಇವುಗಳ ಜೊತೆಗೆ ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಗೆ ಬೆಂಬಲ ನೀಡುವಂತೆ ಮತ್ತು ಫೇಮ್ ಯೋಜನೆಯ ವಿಸ್ತರಣೆಗೆ ನೆರವಾಗುವಂತೆ ಕೇಂದ್ರ ಸರ್ಕಾರವು ಸಹ ಸೂಚನೆ ನೀಡಿತು ಎಂದು ಒಕ್ಕೂಟದ ಅಧ್ಯಕ್ಷ ಕೆನೆಚಿ ಅಯುಕವಾ ಹೇಳಿದ್ದಾರೆ.
ಎಲ್ಲಾ ವಿಭಾಗಗಳಲ್ಲಿಯೂ ರಫ್ತು ವಹಿವಾಟು ಹೆಚ್ಚಾಗಿದೆ. ದ್ವಿಚಕ್ರ ವಾಹನ ವಿಭಾಗವು ಗರಿಷ್ಠ ಮಟ್ಟದ ರಫ್ತು ಸಾಧಿಸಿದೆ. ಭಾರತದ ಉತ್ಪನ್ನಗಳು ಗುಣಮಟ್ಟ, ವೆಚ್ಚ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಒಪ್ಪಿತವಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.
2021–22ನೇ ಹಣಕಾಸು ವರ್ಷದಲ್ಲಿ ಉದ್ಯಮದ ಬೆಳವಣಿಗೆ ಶೇ 6ರಷ್ಟು ಇಳಿಕೆ ಆಗಿದೆ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್ ಮೆನನ್ ತಿಳಿಸಿದ್ದಾರೆ.
2021–22ನೇ ಹಣಕಾಸು ವರ್ಷದಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟ ಶೇ 13ರಷ್ಟು ಹೆಚ್ಚಾಗಿದೆ. ದ್ವಿಚಕ್ರ ವಾಹನ ಮಾರಾಟ ಶೇ 11ರಷ್ಟು ಇಳಿಕೆ ಆಗಿದೆ. ಆದರೆ, ತ್ರಿಚಕ್ರ ವಾಹನ ಮತ್ತು ವಾಣಿಜ್ಯ ವಾಹನ ಮಾರಾಟ ಹೆಚ್ಚಾಗಿದೆ.
ಮಾರಾಟದ ವಿವರ (ಲಕ್ಷಗಳಲ್ಲಿ)
ವಾಹನ;2021ರ ಮಾರ್ಚ್;2022ರ ಮಾರ್ಚ್;ಇಳಿಕೆ(%)
ಪ್ರಯಾಣಿಕ ವಾಹನ;2.90;2.79;4%
ಮೋಟರ್‌ಸೈಕಲ್;9.93;7.86;21%
ಸ್ಕೂಟರ್;4.58;3.60;21%
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.