ನವದೆಹಲಿ: ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ 10.74 ಲಕ್ಷಕ್ಕೆ ತಲುಪಿದ್ದು, ತ್ರೈಮಾಸಿಕವೊಂದರಲ್ಲೇ ಆಗಿರುವ ಗರಿಷ್ಠ ಮಾರಾಟ ಇದಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಸೋಮವಾರ ತಿಳಿಸಿದೆ.
2022–23ರ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ 10.26 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಮಾರಾಟದಲ್ಲಿ ಶೇ 4.7ರಷ್ಟು ಹೆಚ್ಚಳ ಕಂಡುಬಂದಿದೆ.
ಯುಟಿಲಿಟಿ ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಿಗೆ ಉತ್ತಮ ಬೇಡಿಕೆ ಬಂದಿರುವುದರಿಂದ ಪ್ರಯಾಣಿಕ ವಾಹನಗಳ ಮಾರಾಟದ ಬೆಳವಣಿಗೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಒಕ್ಕೂಟದ ಅಧ್ಯಕ್ಷ ವಿನೋದ್ ಅಗರ್ವಾಲ್ ತಿಳಿಸಿದ್ದಾರೆ. ಆದರೆ ಪ್ರವೇಶ ಮಟ್ಟದ (ಎಂಟ್ರಿ ಲೆವೆಲ್) ಕಾರುಗಳ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. 2018–19ರ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ 1.38 ಲಕ್ಷ ಇದ್ದಿದ್ದು 2022–23ರ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ 35 ಸಾವಿರಕ್ಕೆ ಇಳಿಕೆ ಕಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಪ್ರಯಾಣಿಕ ವಾಹನ ಮಾರಾಟವು 20 ಲಕ್ಷದ ಗಟಿ ದಾಟಿದೆ. ಪ್ರಸಕ್ತ ಹಣಕಾಸು ವರ್ಷದ ಆರು ತಿಂಗಳಿನಲ್ಲಿ ಪ್ರಯಾಣಿಕ ವಾಹನ ಮಾರಾಟವು 20.70 ಲಕ್ಷಕ್ಕೆ ಏರಿಕೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಆರು ತಿಂಗಳಿನಲ್ಲಿ 19.36 ಲಕ್ಷದಷ್ಟು ಮಾರಾಟ ಆಗಿತ್ತು. ಎಂದು ಒಕ್ಕೂಟವು ತಿಳಿಸಿದೆ.
ರಫ್ತು ಶೇ 17ರಷ್ಟು ಇಳಿಕೆ
ಜಾಗತಿಕ ಬಿಕ್ಕಟ್ಟಿನಿಂದಾಗಿ ವಾಹನಗಳ ರಫ್ತು 2023–24ರ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಶೇ 17ರಷ್ಟು ಇಳಿಕೆ ಕಂಡಿದೆ ಎಂದು ಒಕ್ಕೂಟವು ಮಾಹಿತಿ ನೀಡಿದೆ. 2022–23ನೇ ಹಣಕಾಸು ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ 26.80 ಲಕ್ಷ ವಾಹನಗಳನ್ನು ರಫ್ತು ಮಾಡಲಾಗಿತ್ತು. 2023–24ನೇ ಹಣಕಾಸು ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ 22.11 ಲಕ್ಷಕ್ಕೆ ಇಳಿಕೆ ಕಂಡಿದೆ. ಪ್ರಯಾಣಿಕ ವಾಹನ ರಫ್ತು ಶೇ 5ರಷ್ಟು ಹೆಚ್ಚಳ ಕಂಡಿದೆ. ಆದರೆ ದ್ವಿಚಕ್ರ ರಫ್ತು ಶೇ 20ರಷ್ಟು ಇಳಿಕೆ ಕಂಡಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.