ನವದೆಹಲಿ: ಪ್ರಯಾಣಿಕ ವಾಹನ ಸಗಟು ಮಾರಾಟವು ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಶೇ 45ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಗುರುವಾರ ಹೇಳಿದೆ.
ರಾಜ್ಯಗಳು ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಹಬ್ಬದ ಋತು ಹತ್ತಿರವಾಗುತ್ತಿರುವುದರಿಂದ ಕಂಪನಿಗಳು ತಯಾರಿಕೆಗೆ ಗಮನ ನೀಡುತ್ತಿವೆ ಎಂದೂ ಅದು ತಿಳಿಸಿದೆ.
ಕಾರು, ಯುಟಿಲಿಟಿ ವಾಹನಗಳು ಮತ್ತು ವ್ಯಾನ್‌ಗಳನ್ನೂ ಒಳಗೊಂಡು ಒಟ್ಟಾರೆಯಾಗಿ ಪ್ರಯಾಣಿಕ ವಾಹನಗಳ ಮಾರಾಟವು 2021ರ ಜುಲೈನಲ್ಲಿ 2.64 ಲಕ್ಷಕ್ಕೆ ತಲುಪಿದೆ. ಹಿಂದಿನ ವರ್ಷದ ಜುಲೈನಲ್ಲಿ 1.82 ಲಕ್ಷ ವಾಹನಗಳು ಮಾರಾಟ ಆಗಿದ್ದವು.
ದ್ವಿಚಕ್ರವಾಹನ ಮಾರಾಟ ಶೇ 2 ರಷ್ಟು ಇಳಿಕೆ ಆಗಿದ್ದು 12.53ಕ್ಕೆ ತಲುಪಿದೆ. ಹಿಂದಿನ ವರ್ಷದ ಜುಲೈನಲ್ಲಿ 12.81 ಲಕ್ಷ ವಾಹನಗಳು ಮಾರಾಟ ಆಗಿದ್ದವು.
ಮೋಟರ್‌ಸೈಕಲ್ ಮಾರಾಟವು 8.88 ಲಕ್ಷದಿಂದ 8.37 ಲಕ್ಷಕ್ಕೆ ಶೇ 6ರಷ್ಟು ಇಳಿಕೆ ಕಂಡಿದೆ. ಆದರೆ, ಸ್ಕೂಟರ್ ಮಾರಾಟ ಶೇ 10ರಷ್ಟು ಏರಿಕೆ ಆಗಿದೆ. ಅದೇ ರೀತಿ ತ್ರಿಚಕ್ರ ವಾಹನಗಳ ಮಾರಾಟ ಶೇ 41ರಷ್ಟು ಹೆಚ್ಚಾಗಿದೆ. ಎಲ್ಲಾ ಮಾದರಿಗಳನ್ನು ಒಳಗೊಂಡು ಒಟ್ಟಾರೆ ಮಾರಾಟವು 14.76 ಲಕ್ಷದಿಂದ 15.36 ಲಕ್ಷಕ್ಕೆ ಏರಿಕೆ ಆಗಿದೆ.
ಜಾಗತಿಕ ಮಟ್ಟದಲ್ಲಿ ಸೆಮಿ ಕಂಡಕ್ಟರ್‌ನ ಕೊರತೆ ಹಾಗೂ ಸರಕುಗಳ ದರ ಏರಿಕೆಯಿಂದಾಗಿ ದೇಶಿ ಉದ್ಯಮವು ಮುಂಬರುವ ದಿನಗಳಲ್ಲಿಯೂ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಲಿದೆ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್ ಮೆನನ್ ಹೇಳಿದ್ದಾರೆ.
ಒಂದೆಡೆ ಕಂಪನಿಗಳು, ಜನರ ಸುರಕ್ಷತೆಯನ್ನು ಗಮನ ನೀಡುತ್ತಾ ಪೂರೈಕೆ ವ್ಯವಸ್ಥೆಯಲ್ಲಿನ ಸವಾಲುಗಳನ್ನು ನಿರ್ವಹಣೆ ಮಾಡುತ್ತಿದ್ದು, ಇನ್ನೊಂದೆಡೆ ಮೂರನೇ ಅಲೆಯ ಮೇಲೆ ಎಚ್ಚರಿಕೆಯ ಕಣ್ಣಿಟ್ಟಿದೆ. ಸದ್ಯದ ಸವಾಲಿನ ಮತ್ತು ಅನಿಶ್ಚಿತ ವ್ಯಾಪಾರ ಪರಿಸ್ಥಿತಿಯಲ್ಲಿ ತಯಾರಿಕೆ ಮತ್ತು ಮಾರಾಟವನ್ನು ಆದಷ್ಟೂ ಹೆಚ್ಚಿಸಲು ಉದ್ಯಮವು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
2021ರ ಏಪ್ರಿಲ್–ಜುಲೈ ಅವಧಿಯ ಪ್ರಯಾಣಿಕ ವಾಹನ ಮಾರಾಟವು 2016–17ಕ್ಕೆ ಹೋಲಿಸಿದರೆ ಕಡಿಮೆ ಮಟ್ಟದಲ್ಲಿಯೇ ಇದೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.