ನವದೆಹಲಿ: ಪತಂಜಲಿ ಸಮೂಹವು ಮುಂದಿನ ಐದು ವರ್ಷಗಳಲ್ಲಿ ₹1 ಲಕ್ಷ ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಸಮೂಹದ ನೇತೃತ್ವ ವಹಿಸಿರುವ ಬಾಬಾ ರಾಮದೇವ್ ಶುಕ್ರವಾರ ಹೇಳಿದ್ದಾರೆ.
ಸಮೂಹಕ್ಕೆ ಸೇರಿದ ಪತಂಜಲಿ ಫುಡ್ಸ್ ಮುಂದಿನ ಐದು ವರ್ಷಗಳಲ್ಲಿ ₹45 ಸಾವಿರ ಕೋಟಿಯಿಂದ ₹50 ಸಾವಿರ ಕೋಟಿಯಷ್ಟು ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಟ್ರಾಸ್ಯುಟಿಕಲ್ಸ್, ಆರೋಗ್ಯವರ್ಧಕ ಬಿಸ್ಕತ್ತುಗಳು, ಸಿರಿಧಾನ್ಯಗಳು ಹಾಗೂ ಡ್ರೈಫ್ರುಟ್ಸ್ ವಿಭಾಗದಲ್ಲಿ ಪತಂಜಲಿ ಫುಡ್ಸ್ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ‘ಪತಂಜಲಿ ಸಮೂಹವು ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಸವಾಲು ಒಡ್ಡುತ್ತಿದೆ. ನಾವು ಇಂದು ಯೂನಿಲಿವರ್ ಹೊರತುಪಡಿಸಿದರೆ ಇತರ ಎಲ್ಲ ಕಂಪನಿಗಳಿಗಿಂತ ಮುಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಪ್ರವರ್ಧಮಾನಕ್ಕೆ ಬರುತ್ತಿರುವ ಮೇಲ್ಮಧ್ಯಮ ವರ್ಗದ ಗ್ರಾಹಕರನ್ನು ಪತಂಜಲಿ ಫುಡ್ಸ್ ಕಂಪನಿಯ ಪ್ರೀಮಿಯಂ ಉತ್ಪನ್ನಗಳ ಮೂಲಕ ತಲುಪಲು ಸಮೂಹವು ಯತ್ನಿಸುತ್ತಿದೆ. ಜಾಗತಿಕ ಮಟ್ಟದಲ್ಲಿಯೂ ಎಫ್‌ಎಂಸಿಜಿ ವಲಯದಲ್ಲಿ ಪ್ರಮುಖ ಕಂಪನಿಯಾಗುವ ದಿಕ್ಕಿನಲ್ಲಿ ಸಾಗಿದೆ. ಕಂಪನಿಯು ವಿವಿಧ ದೇಶಗಳ 200 ಕೋಟಿ ಜನರನ್ನು ತಲುಪುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪತಂಜಲಿ ಫುಡ್ಸ್‌ನ ಈಗಿನ ವಹಿವಾಟು ಮೊತ್ತ ₹31 ಸಾವಿರ ಕೋಟಿ ಎಂದು ಕಂಪನಿಯ ಸಿಇಒ ಸಂಜೀವ್ ಆಸ್ಥಾನಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.