ADVERTISEMENT

ಪೇಟಿಎಂ ಸಿಇಒ ಆಗಿ ವಿಜಯ್ ಶೇಖರ್ ಶರ್ಮಾ ಮರುನೇಮಕ

ಪಿಟಿಐ
Published 21 ಆಗಸ್ಟ್ 2022, 13:23 IST
Last Updated 21 ಆಗಸ್ಟ್ 2022, 13:23 IST
ವಿಜಯ್ ಶೇಖರ್ ಶರ್ಮಾ
ವಿಜಯ್ ಶೇಖರ್ ಶರ್ಮಾ   

ನವದೆಹಲಿ: ಡಿಜಿಟಲ್ ಪಾವತಿ ವ್ಯವಸ್ಥೆಯ ಮುಂಚೂಣಿದಾರ ಕಂಪನಿ ಪೇಟಿಎಂನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ವಿಜಯ್ ಶೇಖರ್ ಶರ್ಮಾ ಮರುನೇಮಕವಾಗಿದ್ದಾರೆ.

ಪೇಟಿಎಂನ ಮಾತೃಸಂಸ್ಥೆಯಾದ ‘ಒನ್97 ಕಮ್ಯುನಿಕೇಷನ್‌’ನ ಷೇರುದಾರರು ಈ ನೇಮಕವನ್ನು ಸಾಮಾನ್ಯ ಸಭೆಯಲ್ಲಿ ಭಾನುವಾರ ಅನುಮೋದಿಸಿದರು.

ವಿಜಯ್ ಶೇಖರ್ ಶರ್ಮಾ ಅವರ ನೇಮಕಕ್ಕೆ ಸ್ವಲ್ಪಮಟ್ಟಿನ ವಿರೋಧಗಳೂ ಕೂಡ ಷೇರುದಾರರ ವಲಯದಿಂದ ವ್ಯಕ್ತವಾಗಿದ್ದವು. ಶೇ 99.67 ಮತಗಳು ಶರ್ಮಾ ಬೆಂಬಲಿಸಿದರೆ, ಕೇವಲ 0.33 ಮತಗಳು ಅವರ ವಿರುದ್ಧವಾಗಿದ್ದವು.

ADVERTISEMENT

ಶರ್ಮಾ ಅವರು ಇತ್ತೀಚಿನ ವರ್ಷಗಳಲ್ಲಿ ಪೇಟಿಎಂ ಸಾಕಷ್ಟು ಲಾಭದ ಹಾದಿಯಲ್ಲಿ ಇರುವಂತೆ ನೋಡಿಕೊಂಡಿದ್ದರು. ಅದಾಗ್ಯೂ ಕೂಡ ಅವರ ಮರುನೇಮಕಕ್ಕೆ ಸ್ವಲ್ಪಮಟ್ಟಿನ ವಿರೋಧ ಕಂಡುಬಂದಿದ್ದು ಸಾಮಾನ್ಯ ಸಭೆಯಲ್ಲಿ ವಿಶೇಷವಾಗಿತ್ತು.

ಹಾಗೆಯೇ ಷೇರುದಾರರು, ಪೇಟಿಎಂ ಅಧ್ಯಕ್ಷ ಮಧುರ್ ಡಿಯೋರಾ ಹಾಗೂ ಸಿಇಒ ವಿಜಯ್ ಶೇಖರ್ ಶರ್ಮಾ ಅವರ ಸಂಭಾವನೆ ಹೆಚ್ಚಳಕ್ಕೆ ಹಸಿರು ನಿಶಾನೆ ತೋರಿದ್ದಾರೆ.

ಡಿಜಿಟಲ್ ಪಾವತಿ ಸೇರಿದಂತೆ ಇತರ ಡಿಜಿಟಲ್ ಸೇವೆಗಳಿಗಾಗಿ ಪೇಟಿಎಂ ಅನ್ನು ವಿಜಯ್ ಶೇಖರ್ ಶರ್ಮಾ ಅವರು 2010 ರಲ್ಲಿ ಪ್ರಾರಂಭಿಸಿದ್ದರು.

ಶನಿವಾರ ಕಂಪನಿಯ 22ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಶರ್ಮಾ, ‘ಪೇಟಿಎಂ ಕಂಪನಿಯ ಷೇರಿನ ಬೆಲೆಯ ಮೇಲೆ ನಾವು ಯಾವುದೇ ಪ್ರಭಾವವನ್ನೂ ಬೀರಿಲ್ಲ’ ಎಂದು ಹೇಳಿದ್ದರು.

‘ಷೇರಿನ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಕಂಪನಿಯನ್ನು ಲಾಭದಾಯಕವಾಗಿಸುವ ಪ್ರಯತ್ನವನ್ನು ಆಡಳಿತ ಮಂಡಳಿ ಕೈಗೊಂಡಿದೆ’ ಎಂದು ತಿಳಿಸಿದ್ದರು.

ಪೇಟಿಎಂ ಷೇರುಗಳು ಕುಸಿಯಲು ಶರ್ಮಾ ಕಾರಣರಾಗಿದ್ದಾರೆ ಎಂದು ಕೆಲ ಷೇರುದಾರರು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.