ADVERTISEMENT

ನಾಳೆ ಅಖಿಲ ಭಾರತ ಕೈಗಾರಿಕೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 21:19 IST
Last Updated 18 ಡಿಸೆಂಬರ್ 2021, 21:19 IST

ಬೆಂಗಳೂರು: ಕಚ್ಚಾವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪೀಣ್ಯ ಕೈಗಾರಿಕಾ ಸಂಘವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧಇದೇ 20ರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಮುರಳಿಕೃಷ್ಣ, ‘ಆರ್ಥಿಕ ಹಿನ್ನಡೆ, ಕೋವಿಡ್ ಸಾಂಕ್ರಾಮಿಕದಿಂದ ನೆಲ ಕಚ್ಚಿರುವ ಕಿರು, ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ದೊಡ್ಡ ಹೊಡೆತ ನೀಡಿದೆ. ಇದನ್ನು ವಿರೋಧಿಸಿ ಅಖಿಲ ಭಾರತ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ರಾಜ್ಯದ ಎಲ್ಲಾ ಉದ್ಯಮಗಳನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲು ಕರೆ ನೀಡಿದ್ದೇವೆ. ದೇಶದ ಆರ್ಥಿಕ ಭದ್ರತೆಗೆ, ಉದ್ಯೋಗ ಮತ್ತು ಜೀವನಕ್ಕೆ ಆಧಾರವಾಗಿರುವ ಈ ಉದ್ಯಮ ವಲಯವನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಭಾರತದಾದ್ಯಂತ ನಡೆಯಲಿರುವ ಪ್ರತಿಭಟನೆಯಲ್ಲಿ ಕಿರು, ಸಣ್ಣ ಮಧ್ಯಮ ವಲಯದ ಕೈಗಾರಿಕೆಗಳ ಉದ್ಯಮಗಳು ಒಂದು ದಿನದ ಮುಷ್ಕರ ಹೂಡಲಿವೆ. ಪ್ರತೀ ಜಿಲ್ಲೆಗಳಲ್ಲಿರುವ ಕೈಗಾರಿಕಾ ಉದ್ಯಮಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿವೆ. ರಾಜಾಜಿನಗರ,ಬೊಮ್ಮಸಂದ್ರ, ಮಾಚೋಹಳ್ಳಿ, ಮೈಸೂರು ಇಂಡಸ್ಟ್ರೀಸ್‌ ಅಸೋಸಿಯೇಷನ್, ಕರ್ನಾಟಕ ಸ್ಟೇಟ್ ಪಾಲಿಮರ್ಸ್‌ ಇಂಡಸ್ಟ್ರೀಸ್ ಅಸೋಸಿಯೇಷನ್ ಮತ್ತು ವಿವಿಧ ಜಿಲ್ಲೆಗಳ ಇಂಡಸ್ಟ್ರೀಸ್‌ ಅಸೋಸಿಯೇಷನ್‌ಗಳುಪೀಣ್ಯ ಕೈಗಾರಿಕಾ ಸಂಘದ ಜೊತೆ ಭಾಗಿಯಾಗಲಿವೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.